ಬೆಂಗಳೂರು: “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಅವರು ನಮಗೆ ಹೋರಾಟ ಮಾಡುವ ಶಕ್ತಿ ಕೊಟ್ಟಿದ್ದಾರೆ. ಆ ಹೋರಾಟದ ಮೂಲಕವೇ ನಾವು ಜಯಿಸಬೇಕು. ನಮ್ಮದು ಕಾಂಗ್ರೆಸ್ ಜಾತಿ. ನಾವು ಇದನ್ನು ಮುಂದುವರಿಸಿಕೊಂಡು ಹೋಗೋಣ. ನಮ್ಮ ಕೊನೆ ರಕ್ತ ಇರುವರೆಗೂ ನಾವು ಸಂವಿಧಾನ ರಕ್ಷಣೆಗೆ ಹೋರಾಟ ಮಾಡೋಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಆವರಣ ಹಾಗೂ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಸೋಮವಾರ ನಡೆದ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಬೋಧಿಸಿದರು.
ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಹಬ್ಬದಂತೆ ಆಚರಿಸುತ್ತಿದ್ದೇವೆ. ಅವರ ಆಚಾರ, ವಿಚಾರಗಳನ್ನು ಸ್ಮರಿಸುತ್ತಿದ್ದೇವೆ. ಭಾರತದ ಆತ್ಮ ಸಂವಿಧಾನ ನೀಡಿದ ಪರಮಾತ್ಮನಿಗೆ ಗೌರವ ನೀಡಲು ನಾವು ಇಲ್ಲಿ ಸೇರಿದ್ದೇವೆ. ನಾವು ಇಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಪೂಜಿಸುತ್ತಿಲ್ಲ, ಅವರ ಪ್ರತಿಭೆಗೆ ಪೂಜಿಸುತ್ತಿದ್ದೇವೆ. ಅವರ ಪ್ರತಿಭೆ ಒಂದು ಸಮಾಜ, ಒಂದು ಧರ್ಮಕ್ಕೆ ಸೀಮಿತವಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯ ರಕ್ಷಣೆಗೆ ಶ್ರಮಿಸಿದ ನಾಯಕ ಅಂಬೇಡ್ಕರ್. ನಮ್ಮ ಬದುಕಿಗೆ ಹೊಸ ರೂಪ ಕೊಟ್ಟವರು ಅಂಬೇಡ್ಕರ್ ಅವರು. ನವಭಾರತದ ಹರಿಕಾರ ಅಂಬೇಡ್ಕರ್. ಅವರ ಆಲೋಚನೆ ದೂರದೃಷ್ಟಿ, ನೊಂದವರಿಗೆ ಆಸರೆಯಾಗುವ ಚಿಂತನೆ ಶಾಶ್ವತ. ಅಂಬೇಡ್ಕರ್ ಅವರು ತಮಗೆ ಮಾತ್ರ ಸೀಮಿತ ಎಂದು ಕೆಲವರು ಭಾವಿಸಿದ್ದಾರೆ. ಭಾರತದ ಪ್ರತಿ ಪ್ರಜೆಗೂ ಅಂಬೇಡ್ಕರ್ ದೇವರ ಸ್ವರೂಪ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ರಕ್ಷಣೆ ನೀಡಲು ಸಂವಿಧಾನ ತರಲಾಗಿದೆ. ಸಂವಿಧಾನವೇ ನಮ್ಮ ತಂದೆತಾಯಿ” ಎಂದರು.
“ಗೂಂಡೂರಾವ್ ಅವರ ಸರ್ಕಾರದ ಅವಧಿಯಲ್ಲಿ ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ನಮ್ಮ ನಾಯಕರಾಗಿದ್ದ ಬಸವಲಿಂಗಪ್ಪ ಅವರು ವಿಧಾನಸೌಧದ ಮುಂಭಾಗವೇ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯ ಮಾಡಿ ಪ್ರತಿಮೆ ಸ್ಥಾಪಿಸಲಾಯಿತು. ನಂತರ ಈ ರಸ್ತೆಗೆ ಅಂಬೇಡ್ಕರ್ ಬೀದಿ ಎಂದು ಹೆಸರಿಡಲಾಯಿತು. ನನ್ನ ದೇಹ ಸತ್ತರೂ ಭಾರತದ ಸಂವಿಧಾನದ ರೂಪದಲ್ಲಿ ನಾನು ಬದುಕಿರುತ್ತೇನೆ ಎಂದು ಅಂಬೇಡ್ಕರ್ ಹೇಳಿದ್ದರು. ಈ ಸಂವಿಧಾನವನ್ನು ನಾವೆಲ್ಲರೂ ಸೇರಿ ಉಳಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ಸಂವಿಧಾನದ ಶಕ್ತಿ ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಆಗ ನಮ್ಮ ಕೆಲಸ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.
“ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಎಲ್ಲಾ ಧರ್ಮಗ್ರಂಥಗಳು ಇರುವ ವಿಚಾರಗಳು ನಮ್ಮ ಸಂವಿಧಾನದಲ್ಲಿ ಅಡಗಿವೆ. ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ನಮ್ಮೆಲ್ಲರ ಪ್ರವಿತ್ರ ಗ್ರಂಥವಾಗಿದೆ. ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನ ಶತಮಾನೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದೆವು. ಸಂವಿಧಾನ ರಕ್ಷಣೆಯ ಪ್ರತಿಜ್ಞೆ ಮಾಡಲಾಯಿತು” ಎಂದು ಹೇಳಿದರು.
“ಹಿಂದುಳಿದವರು, ಪರಿಶಿಷ್ಟರು, ಬುಡಕಟ್ಟು ಜನರಿಗೆ ಹೊಸ ದಿಕ್ಕು ತೋರಿಸಲಾಗಿದೆ. ನಾವು ಅರ್ಜಿ ಹಾಕಿಕೊಂಡು ನಿರ್ದಿಷ್ಟ ಜಾತಿ ಧರ್ಮದಲ್ಲಿ ಹುಟ್ಟುವುದಿಲ್ಲ. ಇತಿಹಾಸ ಮರೆತವ, ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಾನು ನನ್ನ ಬದುಕಿನಲ್ಲಿ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಕೆಲಸ ಪ್ರಾರಂಭಿಸುತ್ತೇನೆ. ಭಾರತದಲ್ಲಿ ಅನೇಕ ಧರ್ಮ, ಜಾತಿ, ನಾಯಕರುಗಳಿದ್ದಾರೆ. ಆದರೂ ದೇಶದಲ್ಲಿ ಅತಿ ಹೆಚ್ಚು ಪ್ರತಿಮೆಗಳಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದು” ಎಂದರು.
“ಅಂಬೇಡ್ಕರ್ ಅವರ ವಿಚಾರಧಾರೆಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಆಂಜನೇಯ ಅವರು ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡುವ ಕಾನೂನು ತರಲಾಯಿತು. ಆಂಧ್ರಪ್ರದೇಶ ನಂತರ ಈ ಕಾನೂನು ಜಾರಿಗೆ ಮಾಡಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ. ಆ ಕಾಲದಲ್ಲಿ ಈ ಸಮುದಾಯದವರಿಗೆ 37 ಸಾವಿರ ಕೋಟಿ ಅನುದಾನ ಮೀಸಲಿಡಲಾಯಿತು. ಈ ವಿಚಾರವಾಗಿ ಬಿಜೆಪಿಯವರು ಖಾಲಿ ಮಾತನಾಡುತ್ತಾರೆಯೇ ಹೊರತು, ಅವರ ಕಾಲದಲ್ಲಿ ಯಾವುದೇ ಕೆಲಸ ಆಗಿಲ್ಲ. ಜನರ ಬದುಕಿಗಾಗಿ ಏನೂ ಮಾಡಲಿಲ್ಲ. ಮನಮೋಹನ್ ಸಿಂಗ್ ಅವರ ಸರ್ಕಾರ ಬುಡಕಟ್ಟು ಜನರ ರಕ್ಷಣೆಗೆ ಕಾಯ್ದೆ ತಂದಿತು. ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಒಬ್ಬ ರೈತರಿಗೆ ಒಂದು ಎಕರೆ ಜಮೀನು ನೀಡಲು ಮುಂದೆ ಬರಲಿಲ್ಲ. ಆದರೆ ನಮ್ಮ ಸರ್ಕಾರ ಯಾವುದೇ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬ ಸಂದೇಶವನ್ನು ಅಧಿಕಾರಿಗಳಿಗೆ ನೀಡಿದ್ದಾರೆ” ಎಂದು ತಿಳಿಸಿದರು.
ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಹೋರಾಟ
“ಕಾಂಗ್ರೆಸ್ ಸರ್ಕಾರ ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದೆ. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಬಜೆಟ್ ನಲ್ಲಿ 52 ಸಾವಿರ ಕೋಟಿ ಹಣ ಮೀಸಲಿಟ್ಟು ಬೆಲೆಏರಿಕೆಯಿಂದ ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ. ಈ ಬೆಲೆ ಏರಿಕೆ ಪ್ರಾರಂಭವಾಗಿರುವುದು ಕೇಂದ್ರ ಸರ್ಕಾರದಿಂದ ಹೀಗಾಗಿ ಬಿಜೆಪಿಯವರು ಹೋರಾಟ ಮಾಡುವುದಾದರೆ ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೀಮೆಂಟ್, ಬೇಳೆ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಜಿಎಸ್ಟಿ ಮೂಲಕ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ಆದರೂ ನಮ್ಮ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರು ಹೋರಾಟ ಆಂರಂಭಿಸಿದ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ 2 ರಪಾಯಿ, ಅಡುಗೆ ಅನಿಲ ಬೆಲೆ 50 ರೂಪಾಯಿ ಏರಿಕೆ ಮಾಡಿದೆ” ಎಂದು ವಾಗ್ದಾಳಿ ನಡೆಸಿದರು.
“ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ವಿರುದ್ಧ ನಾವು ಏ.17ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಮಟ್ಟದ ಹೋರಾಟ ಹಮ್ಮಿಕೊಂಡಿದ್ದೇವೆ. ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೀವು ಆಗಮಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಹೋರಾಟ ಮಾಡಲಾಗುವುದು” ಎಂದು ತಿಳಿಸಿದರು.
ಮೆಹುಲ್ ಚೋಕ್ಸಿ ಬಂಧನವನ್ನು ದೃಢಪಡಿಸಿದ ಬೆಲ್ಜಿಯಂ: ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಭಾರತ ಮನವಿ | Mehul Choksi
ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ : ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ4 ಹೆಚ್ಚುವರಿ ರೈಲು ಸಂಚಾರ.!