ಶಿವಮೊಗ್ಗ : ಮಕ್ಕಳಲ್ಲಿ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯದ ಕುರಿತು ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಜೊತೆಗೆ ಮೂಲಭೂತ ಸೌಕರ್ಯಗಳು ಮತ್ತು ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯತ್, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಿಷನ್ ಸುರಕ್ಷಾ ಅಭಿಯಾನದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಕ್ಕಳಿಗಾಗಿ ಹಾಗೂ ಸಮಾಜಕ್ಕಾಗಿ ಮಾಡುತ್ತಿರುವ ಸೇವೆ ಎಂದು ತಿಳಿದು ನಿಯಮಿತವಾಗಿ ಈ ಕಾರ್ಯ ನಿರ್ವಹಣೆಯಲ್ಲಿ ತೊಡಗಬೇಕೆಂದರು.
ಮಕ್ಕಳ ಜೀವನ ಅತ್ಯಮೂಲ್ಯವಾಗಿದ್ದು ಅವರನ್ನು ನಾವು ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಇತರೆ ಅಪರಾಧಗಳಿಂದ ರಕ್ಷಣೆ ಮಾಡಿ, ಕಡ್ಡಾಯವಾಗಿ ಶಾಲೆಗೆ ದಾಖಲಾಗುವಂತೆ ಮಾಡಬೇಕು. ಪೋಕ್ಸೊ ಪ್ರಕರಣ ಆಗದಂತೆ, ಮಾದಕ ವಸ್ತುಗಳಿಂದ ಮಕ್ಕಳನ್ನು ದೂರವಿರುವಂತೆ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು. ಮಗುವಿನ ಬೆಳವಣಿಗೆ ಹಾಗೂ ಶೈಕ್ಷಣಿಕ ಅವಕಾಶಗಳನ್ನು ಅರಿತು ಅಧಿಕಾರಿಗಳು ಸಂವೇದನಾಶೀಲತೆಯಿಂದ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮಿಷನ್ ಸುರಕ್ಷಾ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ.
ಸಂಕಷ್ಟಕ್ಕೀಡಾದ, ಮಾನಸಿಕವಾಗಿ ನೊಂದ ಮಕ್ಕಳಿಗೆ ಸಾಂತ್ವನ ಮತ್ತು ನೆರವು ನೀಡುವ ‘ಟೆಲಿ ಮನಸ್’ ಸಹಾಯವಾಣಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಮಕ್ಕಳಿಗೆ ನಿಯಮಗಳನ್ನು ಪಾಲಿಸುವುದನ್ನು ಕಲಿಸಬೇಕು. ಈ ಎಲ್ಲ ಸಮಗ್ರ ವಿಷಯಗಳನ್ನು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮನದಟ್ಟು ಮಾಡುವ ಉದ್ದೇಶದಿಂದ ಪ್ರತಿ ತಾಲ್ಲೂಕು ಪರಿಶೀಲನೆ ಮಾಡಲಾಗುತ್ತಿದೆ. ಅಧಿಕಾರಿಗಳು ಈ ವಿಷಯಗಳ ಗಂಭೀರತೆ ಅರ್ಥ ಮಾಡಿಕೊಂಡು, ಯಾವುದೇ ಲೋಪವಾಗದಂತೆ ಕಾರ್ಯವೆಸಗಬೇಕು ಎಂದರು.
ಜಿಲ್ಲೆಯಲ್ಲಿ 907 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸುವ ಕೆಲಸ ಅತ್ಯಂತ ಪರಿಣಾಮಕಾರಿಯಾಗಿ ಮಾಡಬೇಕು. ಮೇ ತಿಂಗಳಿAದಲೇ ಶಾಲಾ ಮುಖ್ಯೋಪಾಧ್ಯಾಯರು ದುರ್ಬಲ ಮಕ್ಕಳನ್ನು ಗುರುತಿಸಿ ಪಟ್ಟಿ ಮಾಡಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ತರಬೇಕು. ಆಪ್ತಸಮಾಲೋಚನೆಗೆ ಒಳಪಡಿಸುವುದು ಸೇರಿದಂತೆ ಶಾಲೆಗೆ ದಾಖಲಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಖಾಸಗಿ ಶಾಲೆಯವರು ಎಸ್‌ಎಸ್‌ಎಲ್‌ಸಿ ಯಲ್ಲಿ ತಮ್ಮ ಶಾಲೆಗೆ ಉತ್ತಮ ಫಲಿತಾಂಶ ಬರಬೇಕೆಂಬ ಉದ್ದೇಶದಿಂದ 9 ನೇ ತರಗತಿಗೆ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಶಾಲೆಯಿಂದ ಹೊರಗೆ ಕಳುಹಿಸಬಾರದು. ಶಿಕ್ಷಣದ ಗುರಿ, ಪಾಠದೊಂದಿಗೆ, ಆಟ ಮತ್ತು ಊಟವೂ ಆಗಿರಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರಲೇಬೇಕು. ಶಿಕ್ಷಣ ಸಚಿವರೂ ಕೂಡ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು.
ಶಿವಮೊಗ್ಗ ತಾಲ್ಲೂಕಿನಲ್ಲಿ ಆಧಾರ್ ಇಲ್ಲದ 11000 ಮಕ್ಕಳಿದ್ದಾರೆ. ಅಪಾರ್ ಐಡಿ ಇಲ್ಲದ 13213 ಮಕ್ಕಳಿದ್ದಾರೆ. ಆಧಾರ್ ಮತ್ತು ಅಪಾರ್ ಐಡಿ ಸೃಜಿಸಲು ಜನನ ಪ್ರಮಾಣ ಪತ್ರ ಮಾಡಿಸಿಕೊಡಬೇಕು. ಆದ್ದರಿಂದ ಈ ದಾಖಲೆಗಳನ್ನು ಮಾಡಿಸಲು ಎಲ್ಲ ಶಾಲೆಗಳಲ್ಲಿ ಮೇ, ಜೂನ್ ಮಾಹೆಯಲ್ಲಿ ಮಕ್ಕಳ ಜಾತಿ ಪ್ರಮಾಣ ಪತ್ರ ಮಾಡಿಸಲು ಕ್ರಮ ವಹಿಸಬೇಕು. ಮುಖ್ಯೋಪಾಧ್ಯಾಯರು ಮಕ್ಕಳ ಜನನ ಪ್ರಮಾಣ ಪಡೆಯಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿಗಳನ್ನು ಸಿದ್ದಪಡಿಸಿ ಕಳುಹಿಸಬೇಕು. ನಂತರ ಆಧಾರ್ , ಅಪಾರ್ ಗೆ ಕ್ರಮ ವಹಿಸಬೇಕು ಎಂದರು.
ಶಾಲೆಗಳಲ್ಲಿ ರಿಪೇರಿ ಮತ್ತು ಉಪಯೋಗಕ್ಕೆ ಬಾರದ ಶೌಚಾಲಯಗಳ ಪಟ್ಟಿ ಮಾಡಬೇಕು. ಶಿವಮೊಗ್ಗ ತಾಲ್ಲೂಕಿನಲ್ಲಿ ಶೌಚಾಲಯ ಇಲ್ಲದ 172 ಶಾಲಾ ಮಕ್ಕಳ ಮನೆಗಳಿದ್ದು ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆ ವತಿಯಿಂದ ಶೌಚಾಲಯ ಕಟ್ಟಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.
ಮಕ್ಕಳಲ್ಲಿ ಎಲ್ಲ ರೀತಿಯಿಂದ ಅರಿವು ಮೂಡಿಸುವ ಕಾವಲು ಸಮಿತಿ ಸಭೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪಿಡಿಓ ಗಳು ಶೌಚಾಲಯ ಇಲ್ಲದ ಮನೆಗಳನ್ನು ಗುರುತಿಸಿ, ಸ್ವಯಂ ಅರ್ಜಿ ಹಾಕಿ ಪಂಚತAತ್ರ ಯೋಜನೆಯಡಿ ಶೌಚಾಲಯ ಕಟ್ಟಿಸಿಕೊಡಲು ಕ್ರಮ ವಹಿಸಬೇಕು.
ವಿದ್ಯಾರ್ಥಿ ವೇತನ ಪಡೆಯಲು ಬಾಕಿ ಇರುವ ಮಕ್ಕಳಿಗೆ ಸಂಬAಧಿಸಿದAತೆ ಎಲ್ಲ ಶಾಲೆಗಳ ಪ್ರಾಂಶುಪಾಲರು ಅರ್ಜಿ ಸಲ್ಲಿಸಲು ಅವಕಾಶ ಇದೆ. ಅಭಿಯಾನದ ಮಾದರಿಯಲ್ಲಿ ಜಾತಿ ಪ್ರಮಾಣ ಪತ್ರ ಮಾಡಿಸಲು ಕ್ರಮ ವಹಿಸಿ ಎಲ್ಲ ಮಕ್ಕಳು ವಿದ್ಯಾರ್ಥಿವೇತನ ಇತರೆ ಸೌಲಭ್ಯ ಪಡೆಯಲು ಸಾಧ್ಯವಾಗುವಂತೆ ಮಾಡಬೇಕು. ಪ್ರಗತಿ ಮತ್ತು ಅಂತರ ಇಲಾಖೆ ಸಮನ್ವಯಕ್ಕಾಗಿ ಪ್ರತಿ ತಿಂಗಳ ಮೊದಲ ಮಂಗಳ ವಾರ ಕಾವಲು ಸಮಿತಿ ಸಭೆ ನಡೆಸಿ ಕ್ರಮ ವಹಿಸಬೇಕು.
ಮಕ್ಕಳ ಸಾಕ್ಷರತಾ ಕ್ಲಬ್ ಚಟುವಟಿಕೆಗಳು ತುಂಬಾ ಮುಖ್ಯವಾಗಿದ್ದು, ಪೋಷಕರ-ಶಿಕ್ಷಕರ ಸಭೆ ನಡೆಸಿ, ಮಕ್ಕಳ ನಡವಳಿಕೆ ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸಬೇಕು. ಬಾಲ್ಯ ವಿವಾಹ, ಪೋಕ್ಸೊ ಅಪರಾಧದ ಬಗ್ಗೆ, ಬಹು ಮುಖ್ಯವಾಗಿ ಮಕ್ಕಳ ಮೇಲಿನ ದೌರ್ಜನ್ಯ ಎಂದರೇನು ಎಂಬುದನ್ನು ಸಮರ್ಪಕವಾಗಿ ಮತ್ತು ನಿರಂತರವಾಗಿ ಮಕ್ಕಳಿಗೆ ತಿಳಿಸಬೇಕು. ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಸಬೇಕು.
ಶಿವಮೊಗ್ಗ ತಾಲ್ಲೂಕಿನಲ್ಲಿ 29 ಬಾಲ್ಯ ವಿವಾಹ ಪ್ರಕರಣಗಳಿದ್ದು, 15 ವಿವಾಹ ನಡೆದಿದ್ದು, 14 ವಿವಾಹ ತಡೆಯಲಾಗಿದೆ. 09 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇನ್ನುಳಿದ 20 ಮಕ್ಕಳನ್ನು ಶಾಲೆಗೆ ಕರೆತರಲೇಬೇಕು. ಹಾಗೆ ಕ್ರಮ ವಹಿಸಬೇಕು. ಮುಖ್ಯ ಶಿಕ್ಷಕರು ಹಾಗೂ ಪಿಡಿಓ ಮನೆಯಲ್ಲಿರುವ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ತಾಲ್ಲೂಕಿನಲ್ಲಿ 85 ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣ ದಾಖಲಾಗಿದ್ದು ಮಕ್ಕಳ ಮೇಲಿನ ಅಪರಾಧ ತಡೆಯಲು ಕಾವಲು ಸಮಿತಿ ಸಭೆಗಳಲ್ಲಿ, ಮಕ್ಕಳ ಗ್ರಾಮ ಸಭೆಗಳಲ್ಲಿ ಪರಿಣಾಮಕಾರಿಯಾಗಿ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.
ಜಿಲ್ಲಾಧಿಕಾರಿಗಳು, ಮಕ್ಕಳ ಜೀವನ ಹಾಳಾಗ್ತಾ ಇದೆ. ನಾವು ಕೇವಲ ಅಂಕಿ ಸಂಖ್ಯೆಗಳಲ್ಲಿ ಈ ಪ್ರಕರಣಗಳನ್ನು ನೋಡದೆ, ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದರು.
ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 11 ಮಕ್ಕಳ ಪೈಕಿ 6 ಮಕ್ಕಳನ್ನು ಎನ್ ಆರ್ ಸಿ ಗೆ ದಾಖಲಿಸಲಾಗಿದೆ. 3 ಮಕ್ಕಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ತೀವ್ರ ಅಪೌಷ್ಟಿಕತೆಯ ಮಕ್ಕಳ ಮನೆಯನ್ನು ವೈದ್ಯರು ಪ್ರತಿ ತಿಂಗಳು ಕಡ್ಡಾಯವಾಗಿ ಭೇಟಿ ಮಾಡಿ ಪರಿಶೀಲಿಸಬೇಕು ಎಂದು ಸೂಚಿಸಿದರು. ವಿಕಲಚೇತನ ಮಕ್ಕಳಿಗೆ ಅಗತ್ಯವಾದ ನೆರವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ‘ಪಬ್ಲಿಕ್ ಐ ವಾಟ್ಸಾಪ್ ಗ್ರೂಪ್’ ಟೆಲಿ ಮನಸ್ ಸಹಾಯವಾಣಿ 14416 ರ ಕುರಿತಾದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಮಕ್ಕಳ ಬಗೆಗಿನ ಅಪರಾಧಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಕೆ ಮಾಯಣ್ಣ ಗೌಡ, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ: ಸಿಎಂ ಸಿದ್ದರಾಮಯ್ಯ
‘ರಾಜ್ಯ ಸರ್ಕಾರಿ ನೌಕರ’ರ ಗಮನಕ್ಕೆ: ಇನ್ಮುಂದೆ ಸೇವಾ ವಿವರ HRMS ತಂತ್ರಾಂಶದ ‘ESR’ನಲ್ಲೇ ಅನುಷ್ಠಾನ








