ಕೊಪ್ಪಳ: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್ ಕಾಂತರಾಜು ನೇತೃತ್ವದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ವರದಿ ಬಗ್ಗೆ ವಾಸ್ತವ ಸತ್ಯ ತಿಳಿಯದೆ ಮಾತನಾಡುವುದು ಸರಿಯಲ್ಲ. ಎಲ್ಲಾ ಸಚಿವರಿಗೂ ವರದಿ ಪ್ರತಿ ಕಳುಹಿಸಲಾಗುತ್ತಿದೆ. ವರದಿ ಓದಿ ತಿಳಿದುಕೊಳ್ಳಬೇಕು ಎಂದುಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣತಿ ವಾಸ್ತವ ಸತ್ಯ ಯಾರಿಗೂ ಗೊತ್ತಿಲ್ಲ. ಈಗಾಗಲೇ 26 ಮಂತ್ರಿಗಳಿಗೆ ವರದಿ ಪ್ರತಿ ಕಳುಹಿಸಲಾಗಿದೆ. ಎಲ್ಲಾ ಮಂತ್ರಿಗಳಿಗೂ ಪ್ರತಿ ಕಳುಹಿಸಲಾಗುವುದು. ಜಾತಿ ಲೆಕ್ಕ ಹಾಕಲು ಗಣತಿ ಮಾಡಿಲ್ಲ. ಎಲ್ಲ ಸಮುದಾಯಗಳಲ್ಲಿ ವಿದ್ಯಾವಂತರು, ಅವಿದ್ಯಾವಂತರು ಎಷ್ಟಿದ್ದಾರೆ? ಆಸ್ತಿ ಎಷ್ಟಿದೆ? ಬಡವರು ಎಷ್ಟಿದ್ದಾರೆ? ಉದ್ಯೋಗದಲ್ಲಿ ಎಷ್ಟು ಮಂದಿ ಇದ್ದಾರೆ ಇತ್ಯಾದಿ ಮಾಹಿತಿ ಸಂಗ್ರಹಿಸಲು ಈ ಜಾತಿ ಗಣತಿ ಮಾಡಿಸಲಾಗಿದೆ ಎಂದು ತಿಳಿಸಿದರು.
ಇಲ್ಲಿ ನಮಗೆ ಜಾತಿ ಲೆಕ್ಕವಲ್ಲ. ರಾಜ್ಯದ ಪ್ರತಿ ವಿಧಾನಸಭಾವಾರು ಸಮುದಾಯಗಳ ಸ್ಥಿತಿಗತಿ ಕುರಿತ ಮಾಹಿತಿ ಒಳಗೊಂಡ 50 ಸಂಪುಟಗಳ ವರದಿ ಇದೆ. ಈ ವರದಿ ಆಧರಿಸಿ ಎಲ್ಲ ಸಮುದಾಯಗಳ ಬಡವರನ್ನು ಮೇಲೆತ್ತಲು ಯೋಜನೆ ರೂಪಿಸುವುದು ಮುಖ್ಯಮಂತ್ರಿಗಳ ಚಿಂತನೆಯಾಗಿದೆ ಎಂದರು.
ಮಾಧ್ಯಮಗಳಲ್ಲಿ ತೋರಿಸುತ್ತಿರುವುದು ತಪ್ಪು ಮಾಹಿತಿ:
ವರದಿಯನ್ನು ಓದದೆ ಮಾತನಾಡುವುದು ಸರಿಯಲ್ಲ. ವರದಿ ಓದಿ ಕೂಲಂಕಷವಾಗಿ ಚರ್ಚೆ ಮಾಡಲಿ. ಅದಕ್ಕಾಗಿ ಮುಖ್ಯಮಂತ್ರಿ ಅವರು ಒಂದು ವಾರ ಸಮಯ ನೀಡಿದ್ದಾರೆ. ಏ.17ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಅಂಕಿ-ಅಂಶ ಸರಿಯಿಲ್ಲ. ಈ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೂ ವರದಿ ಪ್ರತಿ ನೀಡುವುದಾಗಿ ಸಚಿವರು ತಿಳಿಸಿದರು.
ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಸಂಬಂಧ ಯಾರು ಏನು ಮಾಡಿದ್ದಾರೆ. ಸಿಐಡಿ ಯಾರನ್ನೆಲ್ಲಾ ಬಂಧಿಸಿದೆ. ಬಿಜೆಪಿಗರು ಯಾರು ಭಾಗಿಯಾಗಿದ್ದಾರೆ ಎಲ್ಲದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಒದಗಿಸುತ್ತೇನೆ. ಈ ಸಂಬಂಧ ಸಂಪೂರ್ಣ ಮಾಹಿತಿ ಪಡೆದು ಬಳಿಕ ಪ್ರತಿಕ್ರಿಯಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾತಿ ಗಣತಿ ವರದಿ ಹಿಂಪಡೆದು, ಪ್ರತಿ ಮನೆಗೆ ಹೋಗಿ ವೈಜ್ಞಾನಿಕ ಸಮೀಕ್ಷೆ ಮಾಡಿ: ಆರ್.ಅಶೋಕ್ ಆಗ್ರಹ
BREAKING: ಹುಬ್ಬಳ್ಳಿಯಲ್ಲಿ ಬಿಹಾರ ಯುವಕನಿಂದ 5 ವರ್ಷದ ಬಾಲಕಿ ಹತ್ಯೆ ಮಾಡಿದ ಆರೋಪಿ ಅರೆಸ್ಟ್