ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಕೇವಲ ಚರ್ಚೆಯಾದರೆ ಸಾಲದು, ಆ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಅಧಿವೇಶನದ ತಯಾರಿ ಬಗ್ಗೆ ನಡೆದ ಸಭೆ ಬಳಿಕ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದರಿಂದ ಆ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಸರ್ಕಾರ ಕೇವಲ ಉತ್ತರ ನೀಡಿದರೆ ಸಾಲದು, ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಮಗ್ರವಾಗಿ ಚರ್ಚೆಯಾಗಿ, ಸಲಹೆ ಸೂಚನೆಗಳು ದೊರೆಯಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳು ದುರಸ್ತಿಯಾಗಿಲ್ಲ. ಶೂ ಸಾಕ್ಸ್ ವಿತರಣೆಯಾಗಿಲ್ಲ. ಈ ಬಗ್ಗೆ ಸ್ಪೀಕರ್ ಗೆ ಪತ್ರ ಬರೆಯಲಿದ್ದೇನೆ. ಈ ಕುರಿತು ಕೂಡ ಸುದೀರ್ಘವಾಗಿ ಚರ್ಚೆಯಾಗಬೇಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕರಿಗೆ ವಿಶೇಷ ಸವಲತ್ತು, ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯಗಳ ಬಳಕೆ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆ, ಮಳೆ ಹಾನಿ ಪರಿಹಾರದ ಬಗ್ಗೆ, ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ಬಗ್ಗೆ ಚರ್ಚಿಸಲಿದ್ದೇವೆ ಎಂದರು.
ಜೆಡಿಎಸ್ ಜೊತೆ ಸಮನ್ವಯ ಸಭೆ ನಡೆಸಿ, ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.








