ಬೆಂಗಳೂರು: ಕೇಂದ್ರ ಸರ್ಕಾರ ನಡೆಸುತ್ತಿರುವುದು ಜಾತಿಗಣತಿ. ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ನಡೆಸುತ್ತಿದ್ದು ಗುರುವಾರ ಅಧಿಕೃತ ಆದೇಶ ಹೊರಡಿಸಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಬುಧವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದು ಮಹತ್ವದ ವಿಚಾರಗಳನ್ನು ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವರದಿ ರಚನೆಯ ಸಿದ್ಧತೆಗಳು ಅಂತಿಮಗೊಳ್ಳುತ್ತಿದ್ದು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ನೇತೃತ್ವದ ನಿಯೋಗವು ಮುಂದಿನ ಸೋಮವಾರ ತೆಲಂಗಾಣಕ್ಕೆ ತೆರಳಿ ಅಲ್ಲಿನ ಸಮೀಕ್ಷೆಯ ಪದ್ಧತಿಯನ್ನು ಅಧ್ಯಯನ ನಡೆಸಲಿದೆ ಎಂದರು.
ಕಾಂತರಾಜು ಅವರ ವರದಿ ರಚಿಸಿ 10 ವರ್ಷ ಕಳೆದಿರುವುದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ವರದಿ ನೀಡಬೇಕು ಎಂದು ಮುಖ್ಯಮಂತ್ರಿಗಳು ಆಯೋಗಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.
ಸಮೀಕ್ಷೆ ನಡೆಸಲು ಶಿಕ್ಷಕರನ್ನೇ ಬಳಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಇದಕ್ಕೆ ಕೈಜೋಡಿಸಲಿದ್ದಾರೆ. ಮುಂದಿನ ಹಂತಗಳಲ್ಲಿ ಹೇಗೆಲ್ಲ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು, ಸಮೀಕ್ಷೆಯ ಮಾದರಿ ಹೇಗಿರಬೇಕು, ಶಿಕ್ಷಕರಿಗೆ ಸಮೀಕ್ಷೆಯ ತರಬೇತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ನಿರಂತರವಾಗಿ ಸಭೆಗಳು ನಡೆಯಲಿವೆ.
ಈ ಹಿಂದೆ ಕಾಂತರಾಜು ಅಯೋಗವು ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಸಮೀಕ್ಷಾ ಮಾದರಿ ಸಂಗ್ರಹಕ್ಕೆ 54 ಕಾಲಂಗಳು ಇದ್ದವು. ಅದರಂತೆ ಪ್ರತಿ ಮನೆಗೆ ತೆರಳಿ ಅವುಗಳನ್ನು ಭರ್ತಿ ಮಾಡಿ ಅದರ ಆಧಾರದ ಮೇಲೆ ಸಮೀಕ್ಷಾ ವರದಿ ರಚಿಸಲಾಗಿತ್ತು. ಈ ಬಾರಿ ಎಷ್ಟು ಮಾದರಿ ಇರಬೇಕು ಎಂಬುದರ ಬಗ್ಗೆ ನಿರ್ಧರಿಸಲು ತಜ್ಞರ ತಂಡವೊಂದನ್ನು ರಚಿಸಲು ತೀರ್ಮಾನಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ನಾಳೆಯಿಂದ ಪ್ರಾರಂಭವಾಗುತ್ತವೆ ಎಂದು ಹೇಳಿದರು.
ಸಮೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುವುದು. ಮನೆ ಮನೆ ಸಮೀಕ್ಷೆಯ ಜೊತೆಗೆ ತಂತ್ರಜ್ಞಾನವನ್ನೂ ಸಹ ಬಳಸಿಕೊಳ್ಳಲಾಗುವುದು. ಒಂದು ವೇಳೆ ಸಮೀಕ್ಷೆ ಮಾಡುವವರು ತಮ್ಮ ಮನೆಗೆ ಭೇಟಿ ನೀಡಿದ ವೇಳೆ ಲಭ್ಯ ಇಲ್ಲದಿದ್ದಾಗ ಅಂತಹವರು ಸ್ವಯಂ ವಿವರಗಳನ್ನು ದಾಖಲು ಮಾಡುವುದಕ್ಕೆ ಆ್ಯಪ್ ಸೇರಿ ಮುಂತಾದ ತಾಂತ್ರಿಕ ಸೌಲಭ್ಯಗಳನ್ನು ಸಹ ಬಳಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿವರಿಸಿದರು.
ದಸರಾ ರಜೆಯಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಂಡು 15 ದಿನಗಳಲ್ಲಿ ಸಮೀಕ್ಷೆ ನಡೆಸಲಾಗುವುದು. ಶಾಲಾ ರಜೆ ವೇಳೆ ಯಾವುದೇ ತೊಂದರೆ ಆಗುವುದಿಲ್ಲ. ಅಗತ್ಯ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗುವುದು. 15 ದಿನದಲ್ಲಿ ಸಮೀಕ್ಷೆ ನಡೆಸಲು ಯಾವುದೇ ತೊಂದರೆ ಆಗುವುದಿಲ್ಲ. ಏಳು ಕೋಟಿ ಜನರು ಕೂಡ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಸರ್ಕಾರ ಮಾಡುತ್ತಿರುವುದು ಜಾತಿ ಗಣತಿ ಅಲ್ಲ ಎಂಬುದು ಈಗಲೇ ಸ್ಪಷ್ಟಪಡಿಸುತ್ತೇವೆ. ಜಾತಿಗಣತಿಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರ ಮಾಡುತ್ತಿರುವ ಜಾತಿಗಣತಿಗೂ ರಾಜ್ಯ ಸರ್ಕಾರದ ಸಮೀಕ್ಷೆಗೂ ವ್ಯತ್ಯಾಸ ಇದೆ. ರಾಜ್ಯ ಸರ್ಕಾರವು ರಾಜ್ಯದ ಪ್ರತಿ ವ್ಯಕ್ತಿಯ ಸಾಮಾಜಿ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತದೆ. ಆ ವ್ಯಕ್ತಿಯ ಓದು, ಉದ್ಯೋಗ, ವ್ಯಾಪಾರ, ಆರ್ಥಿಕ ಸ್ಥಿತಿಗತಿ ಅರಿಯುವ ಉದ್ದೇಶ ಇದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಂತಹವರು ಯಾವುದೇ ಸಮಯದಾಯದರಾಗಿದ್ದರೂ ಅವರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿ ಅವರನ್ನು ಮೇಲಕ್ಕೆತ್ತಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹುದಿನಗಳ ಆಸೆ ಮತ್ತು ಕನಸು ಎಂದು ಹೇಳಿದರು.
ಕೇಂದ್ರ ತನ್ನ ಬಜೆಟ್ ಗಾತ್ರದಲ್ಲಿ ಶೇ.24.1 ರಷ್ಟು ಮೊತ್ತವನ್ನ ಎಸ್ಸಿ – ಎಸ್ಟಿ ವರ್ಗಕ್ಕೆ ಮೀಸಲಿಡಲಿ
ಕೇಂದ್ರ ಸರ್ಕಾರವೂ ಸಹ ಸಿದ್ದರಾಮಯ್ಯ ಅವರ ಸರ್ಕಾರದ ಮಾದರಿಯನ್ನು ಅನುಸರಿಸಿ ಪ್ರತಿ ವ್ಯಕ್ತಿಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ ನಡೆಸಬೇಕು. ಈ ಮೂಲಕ ದೇಶದ ಜನಸಂಖ್ಯೆಗೆ ಅನುಗುಣವಾಗಿ ತನ್ನ ಬಜೆಟ್ ವಿಂಗಡಿಸಬೇಕು. ಶೇ.24.1ರಷ್ಟು ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಜೆಟ್‌ನ ಅನುದಾನ ಮೀಸಲಿಡಬೇಕು. ಅದು ಬಿಟ್ಟು ಪರಿಶಿಷ್ಟರ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಪ್ರಸಾದ ಹಂಚುವುದನ್ನು ನಿಲ್ಲಿಸಬೇಕು ಎಂದು ಸವಾಲು ಹಾಕಿದರು.
ವೀರಶೈವ ಲಿಂಗಾಯತ ಪಂಚಪೀಠದವರು ದಾವಣಗೆರೆಯ ಸಮಾವೇಶದ ಮೂಲಕ ತಮ್ಮ ಸಮುದಾಯದವರು ಜಾತಿಗಣತಿಯನ್ನು ಏನು ಬರೆಸಬೇಕು ಎಂದು ಹೇಳಿದ್ದಾರೆ. ಇದು ಸ್ವಾಗತಾರ್ಹ. ಅವರು ಜಾತಿಗಣತಿಯನ್ನು ವಿರೋಧ ಮಾಡಿಲ್ಲ. ಸಮೀಕ್ಷೆಯಲ್ಲಿ ಅವರವರ ಸಮುದಾಯ ಏನು ದಾಖಲಿಸಬೇಕು ಎಂಬುದು ಅವರಿಗೆ ಬಿಟ್ಟಿದ್ದು. ಇದಕ್ಕೆ ಯಾರ ಅಭ್ಯಂತರವಾಗಲಿ, ಕಟ್ಟಪ್ಪಣೆಯಾಗಲಿಇಲ್ಲ ಎಂದರು.
ರಾಜ್ಯ ರಾಜಕಾರಣದಲ್ಲಿ ಏನಾದರೂ ಕ್ರಾಂತಿ ಆಗಲಿದೆಯೇ ಎಂಬ ಪ್ರಶ್ನೆಗೆ, ಜನವರಿಯಲ್ಲಿ ಮಕರ ಸಂಕ್ರಾಂತಿ ಇದೆ. ಇದು ಬಿಟ್ಟರೆ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ಸಚಿವರು ಚಟಾಕಿ ಹಾರಿಸಿದರು.
ರಾಜ್ಯದಲ್ಲಿ ‘KPME ನಿಯಮ’ ಉಲ್ಲಂಘಿಸಿದ ಆಸ್ಪತ್ರೆಗಳಿಗೆ ‘ಆರೋಗ್ಯ ಇಲಾಖೆ’ ಶಾಕ್: ದಂಡ, FIR ದಾಖಲು
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ