ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳವನ್ನು ತಡೆಯಲು ಸರ್ವೋಚ್ಛ ನ್ಯಾಯಾಲಯವು ನೀಡಿರುವ ನಿರ್ದೇಶನಗಳನ್ವಯ 10 ಮತ್ತು 10 ಕ್ಕಿಂತ ಹೆಚ್ಚಿನ ಕಾರ್ಮಿಕರನ್ನು (ಮಹಿಳಾ ಮತ್ತು ಪುರುಷರು ಒಳಗೊಂಡು) ಹೊಂದಿರುವ ಪ್ರತಿ ಅಂಗಡಿ, ವಾಣಿಜ್ಯ ಸಂಸ್ಥೆ, ಕಾರ್ಖಾನೆ ಮತ್ತು ಇತರೆ ಸಂಸ್ಥೆಗಳ ಮಾಲೀಕರು/ ಪಾಲುದಾರರು/ ನಿರ್ದೇಶಕರು ತಮ್ಮ ತಮ್ಮ ಸಂಸ್ಥೆಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿದೆ.
ಹಲವು ಸಂಸ್ಥೆಗಳು ಇದುವರೆಗೂ ಸಮಿಯನ್ನು ರಚಿಸದಿರುವುದು ಅಥವಾ ರಚಿಸಿರುವ ಬಗ್ಗೆ ಮಾಹಿತಿಯನ್ನು ನೀಡದಿರುವುದು ಕಂಡುಬಂದಿದ್ದು, ನ್ಯಾಯಾಲಯದ ಸೂಚನೆಯನ್ವಯ ಕನಿಷ್ಠ 4 ಸದಸ್ಯರನ್ನೊಳಗೊಂಡ ಆಂತರಿಕ ದೂರು ಸಮಿತಿ ಅಂದರೆ ಆ ಸಮಿತಿಯ ಅಧ್ಯಕ್ಷರು-ಸಂಸ್ಥೆಯ ಹಿರಿಯ ಮಹಿಳಾ ಉದ್ಯೋಗಿಯಾಗಿರಬೇಕು, ಆ ಸಮಿತಿಯಲ್ಲಿ ಮಹಿಳಾ ಸಮಸ್ಯೆಗಳಿಗೆ ಬದ್ಧರಾಗಿರುವ ಸಾಮಾಜಿಕ ಕಾರ್ಯ ಅಥವಾ ಕಾನೂನು ಜ್ಞಾನದಲ್ಲಿ ಅನುಭವ ಹೊಂದಿರುವ ಇಬ್ಬರು ಸಂಸ್ಥೆಯ ನೌಕರರು ಸದಸ್ಯರಿರಬೇಕು ಮತ್ತು ಮಹಿಳಾ ಸಮಸ್ಯೆಗಳಿಗೆ ಬದ್ಧರಾಗಿರುವ ಒಂದು ಸರ್ಕಾರೇತರ ಸಂಸ್ಥೆ ಅಥವಾ ಸಂಘದ ವ್ಯಕ್ತಿಯಾಗಿರುವ ಒಬ್ಬರು ಬಾಹ್ಯ ಸದಸ್ಯರಿರಬೇಕು.
ಒಟ್ಟಾರೆ ಆ ಸಮಿತಿಯಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರಿರುವ ಆಂತರಿಕ ದೂರು ಸಮಿತಿಯನ್ನು ಈ ಕೂಡಲೇ ರಚಿಸಿ ನಂತರ ಆನ್‌ಲೈನ್ ಮೂಲಕ ಶಿ ಬಾಕ್ಸ್ ಪೋರ್ಟಲ್ https://shebox.wcd.gov.in ರಲ್ಲಿ ನೊಂದಾಯಿಸಿಕೊಂಡು ಆಂತರಿಕ ದೂರು ಸಮಿತಿಯ ವಿವರಗಳನ್ನು ಅಪ್‌ಲೋಡ್ ಮಾಡಿಕೊಂಡಿರುವ ಬಗ್ಗೆ ದಾಖಲೆಗಳನ್ನು ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಇವರಿಗೆ ಸಲ್ಲಿಸಿ ಅದರ ಪ್ರತಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಶಿವಮೊಗ್ಗ ಇಲ್ಲಿಗೆ ಸಲ್ಲಿಸುವಂತೆ ಹಾಗೂ ತಪ್ಪಿದಲ್ಲಿ ಅಂತಹ ಸಂಸ್ಥೆಗಳ ವಿವರವನ್ನು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದೂ.ಸಂ.: 08182-295514, ಜಿಲ್ಲಾ ಕಾರ್ಮಿಕ ಅಧಿಕಾರಿ, ಶಿವಮೊಗ್ಗ ದೂ.ಸಂ.: 08182-248940 ಇವರುಗಳನ್ನು ಸಂಪರ್ಕಿಸುವುದು.








