ಬೆಂಗಳೂರು : ಮಳೆ ಬರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮಳೆ ಬರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸುವ ಕುರಿತಂತೆ ಈಗಾಗಲೇ ಉಲ್ಲೇಖ(1)ರ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ.
ದಿನಾಂಕ:25/07/2025 ರಂದು ತೀವ್ರ ಮಳೆಯಿಂದಾಗಿ ತೆಂಗಿನ ಮರ ಬಿದ್ದು, ಶ್ರೀ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಂಸಭಾವಿ ತಾ:ಹಿರೇಕೆರೂರ ತಾ:ಹಾವೇರಿ ಈ ಅನುದಾನ ರಹಿತ ಶಾಲೆಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿರುತ್ತಾನೆ. ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಸದರ ಅಹಿತಕರ ಘಟನೆ ಹಿನ್ನೆಲೆಯಲ್ಲಿ, ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ಮತ್ತು ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಧಾರವಾಡರವರ ನೇತೃತ್ವದಲ್ಲಿ ದಿನಾಂಕ:27/07/2025 ರಂದು ನಡೆದ ಗೂಗಲ್ ಸಭೆಯಲ್ಲಿ, ಶಾಲಾ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿ. ಒಟ್ಟಿನಲ್ಲಿ Presence of Mind ನೊಂದಿಗೆ ಕಾರ್ಯನಿರ್ವಹಿಸುತ್ತಾ ಮಕ್ಕಳು ಮನೆಯ ಸುರಕ್ಷಿತ ವಾತಾವರಣವನ್ನು ಅನುಭವಿಸುತ್ತಾ ಹಾಗೂ ಶಿಕ್ಷಕರುಗಳು ಸುರಕ್ಷತೆಯೊಂದಿಗೆ ಶಿಕ್ಷಣ ನೀಡುತ್ತ ಕಾರ್ಯನಿರ್ವಹಿಸುವ ಕುರಿತಂತೆ ಈ ಕೆಳಗಿನ ಅಂಶಗಳನ್ವಯ ಕ್ರಮವಹಿಸಲು ನಿರ್ದೇಶಿಸಲಾಗಿದೆ.
1) ಶಾಲೆಯಲ್ಲಿರುವ ಪ್ರತಿ ತರಗತಿ ಕೊಠಡಿಗಳು ಹಾಗೂ ಇತರ ಕೊಠಡಿಗಳು ಸುಸ್ಥಿತಿಯಲ್ಲಿರುವ ಬಗ್ಗೆ ಗಮನ ಹರಿಸುವುದು.
2) ದುರಸ್ತಿ ಅವಶ್ಯಕತೆ ಇರುವ ತರಗತಿ ಕೊಠಡಿಗಳನ್ನು ಬಳಸದೆ ಪರ್ಯಾಯ ಕೊಠಡಿಗಳಲ್ಲಿ ತರಗತಿಗಳ ವ್ಯವಸ್ಥೆ ಮಾಡಿಕೊಳ್ಳುವುದು. ಮತ್ತು ಇಂತಹ ಕೊಠಡಿಗಳಿಗೆ ಬೀಗ ಹಾಕಿ ವಿದ್ಯಾರ್ಥಿಗಳು ಇಂತಹ ಕೊಠಡಿಗಳ ಹತ್ತಿರ ತೆರಳದಂತೆ ಗಮನ ಹರಿಸುವುದು.
3) ಕಾರಿಡಾರ್ ಗಳ ಮೇಲಾವಣಿಯ ಸಿಮೆಂಟ್ ಕಿತ್ತು ಬೀಳುತ್ತಿದ್ದರೆ ಆ ಭಾಗದಲ್ಲಿ ವಿದ್ಯಾರ್ಥಿಗಳು ಸುಳಿಯದಂತೆ ಕ್ರಮವಹಿಸುವುದು ಹಾಗೂ ಲಭ್ಯವಿರುವ ಅನುದಾನದಲ್ಲಿ ತಕ್ಷಣ ದುರಸ್ತಿ ಮಾಡಿಸಲು ಕ್ರಮ ವಹಿಸುವುದು.
4) ಅದೇ ರೀತಿ ಕೊಠಡಿಗಳ ಮೇಲ್ಮಾವಣಿಗಳ ಸಿಮೆಂಟ್ ಅಲ್ಲಲ್ಲಿ ಉದುರಿ ಬೀಳುತ್ತಿದ್ದರೆ ಲಭ್ಯವಿರುವ ಅನುದಾನದಲ್ಲಿ ಅಥವಾ ಸಂಚಿತ ನಿಧಿಯಲ್ಲಿ ದುರಸ್ತಿ ಮಾಡಿಸಿಕೊಳ್ಳಲು ನಿಯಮಾನುಸಾರ ಕ್ರಮವಹಿಸುವುದು.
5) ಕಟ್ಟಡದ ಮೇಲ್ಬಾಗದಲ್ಲಿ (ರೂಫ್) ನೀರು ನಿಲ್ಲದಂತೆ ಮಣ್ಣು ಕಸ ಕಡ್ಡಿ ಕಳೆ ಇತ್ಯಾದಿಗಳನ್ನು ತೆಗೆದುಹಾಕಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವುದು. ನೀರು ಹರಿದು ಹೋಗುವಂತೆ ಪೈಪ್ ಗಳನ್ನು ಜೋಡಿಸುವುದು.
6) ಗ್ರಾಮ ಪಂಚಾಯತ್ /ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ ಮೈದಾನದಲ್ಲಿ ನೀರು ನಿಲ್ಲದಂತೆ ಹಾಗೂ ಸರಾಗವಾಗಿ ಹರಿದು ಹೋಗುವಂತೆ ಚರಂಡಿ ವ್ಯವಸ್ಥೆ ಹಾಗೂ ಮೋರಿಗಳನ್ನು ಮಾಡಿಸಿಕೊಳ್ಳಲು ಕ್ರಮವಹಿಸುವುದು.
7) ಗ್ರಾಮ ಪಂಚಾಯತ್ /ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ ಆವರಣದ ಮುಂದೆ ಮಕ್ಕಳು ಓಡಾಡುವ ದಾರಿಯಲ್ಲಿ ಚರಂಡಿ ಕಟ್ಟಿಕೊಂಡಿದ್ದರೆ ಸ್ವಚ್ಛಗೊಳಿಸಲು ಅಗತ್ಯ ಕ್ರಮವಹಿಸುವುದು.
8) ಗ್ರಾಮ ಪಂಚಾಯತ್ /ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ ಆವರಣದ ಸುತ್ತುಮುತ್ತ ತಗ್ಗುಗಳಿದ್ದರೆ ಮುಚ್ಚಿಸಲು, ಕೆರೆ ಕಟ್ಟೆಗಳಿದ್ದರೆ ಅವುಗಳ ಸುತ್ತಲೂ ತಂತಿ ಬೇಲಿ ಹಾಕಿಸಲು,ಕಸದ ತೊಟ್ಟಿಗಳು ತಿಪ್ಪೆಗುಂಡಿ ಇತ್ಯಾದಿಗಳಿದ್ದರೆ ಅಂತವುಗಳನ್ನು ತೆಗೆಸಲು ಹಾಗೂ ಶಾಲಾ ಆವರಣದಲ್ಲಿ ನೀರಿನ ಟ್ಯಾಂಕ್ ಗಳಿದ್ದರೆ ಅದರ ಬಳಿ ಸುಳಿಯದಂತೆ ಅದರ ಸುತ್ತಲೂ ತಂತಿ ಬೇಲಿ ಹಾಕಿಸಲು ಕ್ರಮ ವಹಿಸುವುದು.
9) ನೀರಿನ ಸಂಗ್ರಹಣೆಗಾಗಿ ಇರುವ ತೆರೆದ ತೊಟ್ಟಿಗಳು, ತೆರೆದ ಅಂಡರ್ ಗೌಂಡ್ ಟ್ಯಾಂಕಗಳಿದ್ದರೆ ಅವುಗಳನ್ನು ಆರ್ ಸಿ ಸಿ ಇಂದ ಕ್ಲೋಸ್ ಮಾಡುವಂತೆ ಹಾಗೂ ಅನುಪಯುಕ್ತ ತೆರೆದ ಕೊಳವೆ ಬಾವಿಗಳಿದ್ದಲ್ಲಿ ಮುಚ್ಚಿಸುವಂತೆ ಕ್ರಮವಹಿಸುವುದು.
10) ಶಾಲಾ ಆವರಣದಲ್ಲಿ ವಿದ್ಯುತ್ ಕಂಬಗಳು ಇದ್ದರೆ ವಿದ್ಯುತ್ ತಂತಿಗಳು ಹಾಯ್ದು ಹೋಗಿದ್ದರೆ ಅವುಗಳನ್ನು ಸ್ಥಳಾಂತರಿಸಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಅಗತ್ಯ ಕ್ರಮವಹಿಸುವುದು.
11) ಶಾಲೆಗೆ ಸಂಪರ್ಕ ಪಡೆದಿರುವ ವಿದ್ಯುತ್ ತಂತಿಗಳು ವಿದ್ಯಾರ್ಥಿಗಳಿಗೆ ನಿಲುಕದಂತೆ, ಸುರಕ್ಷಿತ ಎತ್ತರದಲ್ಲಿರುವಂತೆ ಹಾಗೂ ಹರಿದು ಬೀಳದಂತೆ ಮೇಲಿಂದ ಮೇಲೆ ಗಮನಿಸುತ್ತಿರಬೇಕು. ವಿದ್ಯುತ್ ಸಂಪರ್ಕಕ್ಕಾಗಿ ಇರುವ ಸ್ವಿಚ್ ಬೋರ್ಡ್ ಗಳನ್ನು ಪದೇ ಪದೇ ಪರೀಕ್ಷಿಸುತ್ತಾ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು.
12) ಶಾಲಾ ಆವರಣದಲ್ಲಿ ಹಳೆಯ ಗಿಡಮರಗಳಿದ್ದರೆ ಅವುಗಳನ್ನು ತೆಗೆದುಹಾಕುವುದು, ರೆಂಬೆ ಕೊಂಬೆಗಳನ್ನು ಕತ್ತರಿಸುವ, ತೆಂಗಿನ ಮರಗಳಿದ್ದರೆ ಒಣಗಿದ ಗರಿಗಳನ್ನು ಸುರಕ್ಷಿತವಾಗಿ ತೆಗೆಯುವಂತೆ ಹಾಗೂ ಕಾಯಿಗಳು ಸಂಪೂರ್ಣ ಒಣಗಿ ಉದುರಿ ಬೀಳುವ ಮುನ್ನ ತೆಗೆಯುವಂತಹ ವ್ಯವಸ್ಥೆಯಾಗಬೇಕು. (ವನ್ಯಪ್ರಾಣಿಗಳು ಮಂಗ ಆಹಾರಕ್ಕಾಗಿ ಇಂಥ ಮರಗಳ ಮೇಲೆ ಜಿಗಿದಾಡುವ ಸಂಭವವಿರುತ್ತದೆ) ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ಇಂತಹ ಮರಗಳ ಹತ್ತಿರ ಸುಳಿಯದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಇಂಥ ಮರಗಳನ್ನು ತೆಗೆದುಹಾಕಲು ಅಗತ್ಯ ಕ್ರಮವಹಿಸುವುದು.
13) ಶಾಲೆಯಿಂದ ಮನೆಗೆ ಮತ್ತು ಮನೆಯಿಂದ ಶಾಲೆಗೆ ಬರುವ ಸಮಯದಲ್ಲಿ ಮಿಂಚು ಗುಡುಗು ಮಳೆ ಬರುವಂತಹ ಸಂದರ್ಭದಲ್ಲಿ ಗಿಡ ಮರಗಳ ಕೆಳಗೆ ನಿಂತುಕೊಳ್ಳದಂತೆ ವೈಜ್ಞಾನಿಕ ಕಾರಣಗಳನ್ನು ತಿಳಿ ಹೇಳುತ್ತಾ ಸುರಕ್ಷಿತ ಕಟ್ಟಡಗಳಿರುವ ಕಡೆಗೆ ತೆರಳುವಂತೆ ಹಾಗೂ ಮಳೆ ಬರುವಾಗ,ಮಳೆ ಬಂದು ನಿಂತ ಮೇಲೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ (ತಗ್ಗು ಗುಂಡಿಗಳನ್ನು ಹಾಗೂ ಚರಂಡಿಗಳನ್ನು ದಾಟದಂತೆ ರಭಸವಾಗಿ ಹರಿಯುವ ನೀರಿನ ಬಳಿ ಸುಳಿಯದಂತೆ ಇತ್ಯಾದಿ)ಬಗ್ಗೆ, ಮಕ್ಕಳಿಗೆ ಪ್ರತಿದಿನ ಪ್ರಾರ್ಥನಾ ಸಮಯದಲ್ಲಿ ತಿಳಿ ಹೇಳುವುದು.
14) ಮಳೆ ಬರುವ ಸಂದರ್ಭದಲ್ಲಿ ಮಕ್ಕಳು ಮನೆಯಿಂದ ಹೊರಬರದೆ ಮನೆಯಲ್ಲಿಯೇ ಉಳಿದು ಅಭ್ಯಾಸ ಮಾಡಿಸುವ ಕುರಿತಂತೆ ಪಾಲಕರಿಗೆ ಫೋನ್ ಮೂಲಕವಾಗಲಿ ವಾಟ್ಸಪ್ ಗುಂಪುಗಳ ಮೂಲಕವಾಗಲಿ ತಿಳಿಸುವುದು. (ಜೀವವಿದ್ದರೆ ಜೀವನ)ಇಂತಹ ವಿವಿಧ ಸಂದೇಶಗಳನ್ನು ಕಳುಹಿಸಲು, ಮಾರ್ಗದರ್ಶನ ನೀಡಲು ತರಗತಿವಾರು ಪಾಲಕರುಗಳ ವಾಟ್ಸಪ್ ಗುಂಪುಗಳನ್ನು ರಚಿಸಿಕೊಳ್ಳುವುದು.
15) ನದಿಯನ್ನು ದಾಟಿಕೊಂಡು ಬೊಟ್ ಗಳ ಮೂಲಕ ಶಾಲೆಗೆ ಬರುವ ಸಂದರ್ಭದಲ್ಲಿ, ಹಳ್ಳ ಕೊಳ್ಳಗಳನ್ನು ದಾಟಿ ನಡೆದುಕೊಂಡು ಬರುವ ಸಂದರ್ಭದಲ್ಲಿ ಪ್ರವಾಹದ ಪರಿಸ್ಥಿತಿಯನ್ನು ಗಮನಿಸಿಕೊಂಡು ಶಾಲೆಗೆ ಕಳುಹಿಸುವಂತೆ ಪಾಲಕರುಗಳಿಗೆ ತಿಳಿ ಹೇಳಬೇಕು ಹಾಗೂ ಪ್ರವಾಹದ ಪರಿಸ್ಥಿತಿಯಲ್ಲಿ ಮಕ್ಕಳು ಹೊರಗೆ ಹೋಗದಂತೆ ನಿರ್ಭಂಧಿಸಬೇಕು.
16) ನದಿ ಪಾತ್ರದ ಹತ್ತಿರವಿರುವ ಶಾಲೆಗಳಲ್ಲಿ ಮಕ್ಕಳು ಕುತೂಹಲಕ್ಕಾಗಿ ನದಿಯ ನೀರಿನ/ಹಳ್ಳದ ನೀರಿನ ಹತ್ತಿರ ತೆರಳದಂತೆ ಎಚ್ಚರಿಕೆ ವಹಿಸುವದು. ನದಿ ಪಾತ್ರಗಳ ಸುತ್ತಲೂ ಮೊಸಳೆ ಹಾವುಗಳಂತಹ ಅಪಾಯಕಾರಿ ಸರೀಸೃಪಗಳು ಹೊರಗಡೆ ಬರುತ್ತಿದ್ದು ಯಾವುದೇ ಸಮಯದಲ್ಲಾದರೂ ಸಹ ಅವುಗಳಿಂದ ದೂರ ಇರುವಂತೆ ಮಕ್ಕಳಿಗೆ ತಿಳಿ ಹೇಳುವುದು.
17) ಶಾಲಾ ಆವರಣದಲ್ಲಾಗಲಿ, ಆವರಣದ ಸುತ್ತಲೂ ಹುಲ್ಲು ಕಳೆ ಮುಳ್ಳಿನ ಪೊದೆಗಳು ಬೆಳೆಯದಂತೆ ಹಾಗೂ ಇವುಗಳಲ್ಲಿ ಅಪಾಯಕಾರಿ ಸರೀಸೃಪಗಳು ಸೇರದಂತೆ ಮುನ್ನೆಚ್ಚರಿಕೆ ಕ್ರಮವಹಿಸುವುದು.
18) ಶಾಲಾ ಆವರಣದಲ್ಲಿ ವಿವಿಧ ರೀತಿಯ ಸಿವಿಲ್ ಕಾಮಗಾರಿಗಳು ನಡೆಯುತ್ತಿದ್ದರೆ ಅಂತಹ ಸ್ಥಳದ ಹತ್ತಿರ ಮಕ್ಕಳು ಯಾವುದೇ ಸಮಯದಲ್ಲಿ ಸುಳಿಯದಂತೆ, ಕಾಮಗಾರಿಗೆ ಬಳಸುವ ಸಾಮಗ್ರಿಗಳ ಜೊತೆ ಆಟವಾಡದಂತೆ ಗಮನಹರಿಸುವುದು ಮತ್ತು ಅಪಾಯದ ಕುರಿತಂತೆ ಮಕ್ಕಳಿಗೆ ತಿಳಿ ಹೇಳುವುದು. (ಬ್ಯಾರಿ ಕೇಡ ನಿರ್ಮಿಸುವುದು )
19) ಸ್ಥಳೀಯ ಸನ್ನಿವೇಶವನ್ನು ಗಮನಿಸಿಕೊಂಡು ಅನಿವಾರ್ಯ ಸಂದರ್ಭದಲ್ಲಿ ಶಾಲೆಗೆ ರಜೆ ಘೋಷಿಸುವ ಕುರಿತಂತೆ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರರ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದು. (ಮಳೆಯ ಸನ್ನಿವೇಶವನ್ನು ಗಮನಿಸಿಕೊಂಡು)
20) ಪ್ರತಿ ದಿನ ಶಾಲೆ ಆರಂಭವಾಗುವ ಮುಂಚೆ ಎಲ್ಲಾ ಕೊಠಡಿಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡು ವಿದ್ಯಾರ್ಥಿಗಳನ್ನು ಕೊಠಡಿಗಳಿಗೆ ಕಳುಹಿಸುವ ಕ್ರಮವಹಿಸುವುದು.
21) ಮಳೆಗಾಲ ಮುಗಿಯುವವರೆಗೆ ಬೆಳಗಿನ 6:00 ಗಂಟೆ ಹಾಗೂ ಸಾಯಂಕಾಲ 5:00 ಗಂಟೆಯ ನಂತರ ಸ್ಥಳೀಯ ಪರಿಸ್ಥಿತಿಯ ಕುರಿತಂತೆ ಮೇಲಾಧಿಕಾರಿಗಳೊಂದಿಗೆ ವಾಟ್ಸಾಪ್ ಗ್ರೂಪ್ ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವುದರೊಂದಿಗೆ ಶಾಲಾ ಸುರಕ್ಷತೆಯ ಕುರಿತಂತೆ ತೀರ್ಮಾನ ತೆಗೆದುಕೊಳ್ಳುವುದು.
22) ಸ್ಥಳೀಯ ಮಳೆ ಸ್ಥಿತಿಗತಿ, ಪ್ರವಾಹ ಪರಿಸ್ಥಿತಿ ಇತ್ಯಾದಿಗಳನ್ನು ಮುಂಚಿತವಾಗಿ ಅರಿತುಕೊಳ್ಳಲು ಕಂದಾಯ ವಿಭಾಗದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ಳುವುದು ಮತ್ತು ಮೇಲಾಧಿಕಾರಿಗಳೊಂದಿಗೆ ಹಂಚಿಕೊಳ್ಳುವುದು.
ಸದರಿ ಸುತ್ತೋಲೆಗೆ ದೃಢೀಕರಣ ಪ್ರಮಾಣ ಪತ್ರವನ್ನು ಲಗತ್ತಿಸಲಾಗಿದ್ದು, ಸದರ ಪ್ರಮಾಣ ಪತ್ರವನ್ನು ಮಳೆಗಾಲ ಮುಗಿಯುವವರೆಗೆ ಎಲ್ಲಾ ಶಾಲೆಯವರು ಭರ್ತಿ ಮಾಡಿ ಅಂದೇ ಸಾಯಂಕಾಲ ನಿಮ್ಮ ವಲಯದ ಸಿ.ಆರ್.ಪಿ ಗಳ ಮೂಲಕ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಲುಪಿಸುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಡೀಕರಣ ಪ್ರಮಾಣಪತ್ರವನ್ನು ಕ್ರೋಢೀಕರಿಸಿ ದಾಖಲಿಸುವುದು. ಅದಾಗ್ಯೂ ಶಾಲೆಗಳಲ್ಲಿ ವ್ಯತಿರಿಕ್ತವಾಗಿ ಘಟನೆಗಳು ನಡೆದಲ್ಲಿ ಸಂಬಂಧಿಸಿದವರ ಮೇಲೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದೆ.
ಈ ಸುತ್ತೋಲೆಗೆ ಚೆಕ್ ಲಿಸ್ಟ್ ನ್ನು ಲಗತ್ತಿಸಲಾಗಿದ್ದು, ಶಾಲೆಗೆ ಸಂದರ್ಶಿಸುವ ಎಲ್ಲಾ ಮೇಲಾಧಿಕಾರಿಗಳು ಸದರಿ ಚೆಕ್ ಲಿಸ್ಟ್ ನ್ನು ಭರ್ತಿ ಮಾಡಿ, ಒಂದು ಪ್ರತಿಯನ್ನು ಶಾಲೆಯಲ್ಲಿ ದಾಖಲಿಸುವುದು ಇನ್ನೊಂದು ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದೆ.