ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರ್ನಾಟಕ IG ಮತ್ತು ಡಿಜಿಪಿ ಖಡಕ್ ಆದೇಶವನ್ನು ಮಾಡಿದ್ದಾರೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿದ್ದು, ಹೊಸ ವರ್ಷದ ಸಂಭ್ರಮಾಚರಣೆಯು ಮದ್ಯಪಾನದ ಪರಿಣಾಮವಾಗಿ ಜನಸಮೂಹದ ಮನಸ್ಥಿತಿಯು ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ಮದ್ಯಪಾನವು ಜನರ ವಿವೇಕಶಕ್ತಿಯನ್ನು ದುರ್ಬಲಗೊಳಿಸುತ್ತದೆ ಹಾಗೂ ಸಂಕೋಚತಾ/ಹಿಂಜರಿಕಾ ಮನೋಭಾವವನ್ನು ಮೀರುವಂತೆ ಮಾಡುತ್ತದೆ. ಕೌಂಟ್‌ಡೌನ್‌ಗಳು ಮತ್ತು ಸಂಭ್ರಮದ ಕ್ಷಣಗಳಿಂದ ಉಂಟಾಗುವ ಉಲ್ಲಾಸವು ಜನಸಮೂಹದಲ್ಲಿ ಸಾಮೂಹಿಕ ಪ್ರೇರೇಪಣೆಯನ್ನು ಸೃಷ್ಟಿಸಿ, ದಟ್ಟ ಗುಂಪಿನೊಳಗಿರುವ ಕಾರಣ ಯಾವ ನಡೆಗೂ ಅಪಾಯವಿಲ್ಲವೆಂಬ ತಪ್ಪು ಕಲ್ಪನೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ.
ವೇದಿಕೆಗಳಲ್ಲಿ ಜನಸ್ತೋಮದ ಹರಿವು ಅಥವಾ ಪಟಾಕಿ ಸಿಡಿಸುವಂತಹ ಪ್ರದರ್ಶನಗಳು ಮುಂತಾದ ಹಲವು ಕಾರಣಗಳಿಂದಾಗಿ ಅಪ್ರಜ್ಞಾತ್ಮಕ ವರ್ತನೆಗಳು ಕಂಡುಬರುತ್ತವೆ. ಜನಸಮೂಹದ ಹರಿವನ್ನು ಒಮ್ಮೆಲೇ ಪ್ರೇರೇಪಿಸಿ ಅಪಾಯಕರ ಅಲೆಗಳಂತೆ ರೂಪುಗೊಳ್ಳಬಹುದಾದಂತಹ ಸಂಗೀತದ ತೀವ್ರತೆಯ ಘಟನಾವಳಿಗಳನ್ನು ಪೊಲೀಸ್ ಅಧಿಕಾರಿಗಳು ಗಮನಿಸಬೇಕಿದೆ. ಪಟಾಕಿ ಸಿಡಿಯುವಲ್ಲಿ ವಿಳಂಬವಾದರೆ ನಿರಾಶೆ ಉಂಟಾಗಿ, ಜನಸಮೂಹದ ಸಂಭ್ರಮವು ತಕ್ಷಣವೇ ಅಸಹನೆ ಮತ್ತು ಕೋಪಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಗುಂಪಿನಲ್ಲಿ ವದಂತಿಗಳು ವೇಗವಾಗಿ ಹರಡಿ, ಅಪಾಯದ ಭ್ರಮೆಯು ಆತಂಕವನ್ನು ಹೆಚ್ಚಿಸುತ್ತದೆ. ಜನಸ್ತೋಮದ ಗುಂಪು ತಮ್ಮ ಸುತ್ತಮುತ್ತಲ ವ್ಯಕ್ತಿಗಳ ವರ್ತನೆಯನ್ನು ಅನುಸರಿಸುವುದರಿಂದ ವ್ಯಕ್ತಿಗತ ನಿಯಂತ್ರಣ ಕಷ್ಟಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಹೊಸ ವರ್ಷಾಚರಣೆಗಾಗಿ ಇಳಿಜಾರು ಮೇಲೆ ಅಥವಾ ಜಾರುವ ಸ್ಥಳಗಳು, ಮೆಟ್ಟಿಲುಗಳಿಂದ ಕೂಡಿದ ಸ್ಥಳಗಳಲ್ಲಿ ಸೇರುವ ಜನಸ್ತೋಮಕ್ಕೆ ಇನ್ನಷ್ಟು ಅಪಾಯಗಳಿರುತ್ತವೆ. ಮಾಲ್‌ಗಳಂತಹ ಕಟ್ಟಡದೊಳಗಿಂದ, ಉಷ್ಣತೆ ಮತ್ತು ಶಬ್ದ ಹೊರಹೋಗದಂತಹ ವಾತಾವರಣದ ಹಿನ್ನೆಲೆಯಲ್ಲಿ ಈ ಸ್ಥಳಗಳಲ್ಲಿ ಭಾವನಾತ್ಮಕ ಅಸ್ಥಿರತೆ ಹೆಚ್ಚಿರುತ್ತದೆ. ಮದ್ಯಪಾನದಿಂದ ಉಂಟಾಗುವ ಆಕ್ರಮಣಶೀಲತೆಗಳಂತಹ ವರ್ತನೆಗಳು, ಸಾಮಾನ್ಯವಾಗಿ ಮದ್ಯಮಾರಾಟ ಸ್ಥಳಗಳ ಬಳಿ ಚುಡಾಯಿಕೆ (ಇವ್-ಟೀಸಿಂಗ್) ಅಥವಾ ಜಗಳಗಳ ರೂಪದಲ್ಲಿ ಕಂಡುಬರುತ್ತವೆ. ದಟ್ಟವಾದ ಜನರ ಗುಂಪುಗಳಲ್ಲಿ ವೈಯಕ್ತಿಕ ಅಂತರ ಕುಗ್ಗುವುದರಿಂದ ಘರ್ಷಣೆ ಹೊಡೆದಾಟಗಳು ಉಂಟಾಗುತ್ತವೆ. ಕೌಂಟ್‌ಡೌನ್ ಘೋಷಣೆಗಳು ಗುಂಪನ್ನು ಏಕೀಕರಿಸಿ, ಸಂಘರ್ಷಗಳನ್ನು ಒಮ್ಮೆಲೇ ಚಿಮ್ಮುವವರೆಗೆ ಮುಚ್ಚಿಡುತ್ತವೆ. ಆದರೆ ಅವು ಏಕಾಏಕಿ ಸ್ಫೋಟಗೊಳ್ಳುತ್ತವೆ. ನಿರ್ಗಮನ ದ್ವಾರಗಳ ಬಳಿ ಕಂಡುಬರುವಂತಹ ಬಾಟಲ್‌ಕ್ ಮೇಲೆ ಅಧಿಕಾರಿಗಳು ತೀವ್ರ ನಿಗಾ ವಹಿಸುವುದು ಸೂಕ್ತ ಎಂದಿದ್ದಾರೆ.
ಗುಂಪಿನಲ್ಲಿರುವ ವ್ಯಕ್ತಿಗಳು ಬೇಜವಾಬ್ದಾರಿ ಮತ್ತು ಧ್ವಂಸಕೃತ್ಯ ಅಥವಾ ಅಶಿಸ್ತಿನ ವರ್ತನೆಗೆ ಕಾರಣವಾಗುತ್ತವೆ. ತಡರಾತ್ರಿಯ ದಣಿವು ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಇನ್ನಷ್ಟು ಕುಗ್ಗಿಸುತ್ತದೆ. ಸಾಮಾಜಿಕ ಮಾಧ್ಯಮಗಳ ಹೈಪ್ ಅತಿರೇಕದ ನಿರೀಕ್ಷೆಗಳ ನಿರೀಕ್ಷೆಯು ಹುಸಿಯಾಗಿ, ನಿರಾಶೆಯಿಂದ ಒತ್ತಡವನ್ನು ಹೆಚ್ಚಿಸಬಹುದು. ಇಂತಹ ಸಮಯದಲ್ಲಿ ಪೊಲೀಸರ ಗೋಚರತೆಯು ಜನರಲ್ಲಿ ಭರವಸೆ ಮೂಡಿಸಿ, ಗುಂಪಿನ ಅತಿರೇಕವನ್ನು ತಡೆಯುತ್ತದೆ. ಪೊಲೀಸರ ಮಧ್ಯಪ್ರವೇಶದಿಂದ ಘಟನೆಗಳು ಬೃಹದಾಕಾರವಾಗುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ. ಪೊಲೀಸರ ಸ್ವಯಂಪ್ರೇರಿತ ಕ್ರಮಗಳು ಶಾಂತಿ, ಸುರಕ್ಷತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಹಕಾರ ನೀಡುತ್ತವೆ ಎಂದು ತಿಳಿಸಿದ್ದಾರೆ.
ಮೇಲ್ಕಂಡ ಹಲವಾರು ಕಾರಣಗಳಿಂದಾಗಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯಾವುದೇ ಅವಘಡಗಳನ್ನು ತಡೆಯಲು, ಸಾರ್ವಜನಿಕ ಶಾಂತಿ ಕಾಪಾಡಲು ಹಾಗೂ ರಾಜ್ಯದಾದ್ಯಂತ ಸುರಕ್ಷಿತ ಆಚರಣೆಗಳನ್ನು ಖಚಿತಪಡಿಸಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕೆಳಕಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಈ ಕೆಳಕಾಣಿಸಿದ ನಿರ್ದೇಶನಗಳನ್ನು ಹೊರಡಿಸಲಾಗಿದೆ.
1. ಸಂಭ್ರಮಾಚರಣೆ ಹಾಟ್ ಸ್ಪಾಟ್‌ಗಳು, ಬೀಚ್‌ಗಳು, ಮಾಲ್‌ಗಳು, ಬಾರ್‌ಗಳು ಮತ್ತು ಹೆದ್ದಾರಿಗಳನ್ನು ಒಳಗೊಂಡು ಅಪಾಯಕಾರಿಯಾದ ಪ್ರದೇಶಗಳಲ್ಲಿ ಸಾಕಾಗುವಷ್ಟು ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸುವುದು.
2. ವಾಹನಗಳ ನಿರಂತರ ಗಸ್ತು, ಪೊಲೀಸರ ಕಾಲ್ನಡಿಗೆ ಗಸ್ತು, ಬೈಕ್ ಗಳ ಗಸ್ತು ಹಾಗೂ ಆಶ್ವಾರೋಹಿ ಗಸ್ತುಗಳು ಸಾರ್ವಜನಿಕರಲ್ಲಿ ಪೊಲೀಸರ ಗೋಚರತೆಯನ್ನು ಹೆಚ್ಚಿಸುತ್ತದೆ ಹಾಗೂ ತುರ್ತು ಪ್ರತಿಕ್ರಿಯೆ ಸಾಧ್ಯವಾಗಿಸುತ್ತದೆ.
3. ಪೂರ್ವಯೋಜಿತ ಸ್ಥಳಗಳಲ್ಲಿ ಟ್ರಾಫಿಕ್ ಮತ್ತು ಎಸ್.ಡಬ್ಲೂ.ಎ.ಟಿ ತಂಡಗಳನ್ನು ಒಳಗೊಂಡಂತೆ ಎಲ್ಲಾ ಘಟಕಗಳನ್ನು ನಿಯೋಜಿಸಿಕೊಳ್ಳುವುದು ಹಾಗೂ ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ವೀಡಿಯೋಗ್ರಾಫಿ ಮಾಡಿಸುವುದು.
4. ಪ್ರಮುಖ ಕಾರ್ಯಕ್ರಮ ಸ್ಥಳಗಳು ಮತ್ತು ಹೆದ್ದಾರಿಗಳ ಪ್ರವೇಶ ನಿರ್ಗಮನ ದ್ವಾರಗಳಲ್ಲಿ “ಡಬ್ಲೂ ಮಾದರಿಯ ಬ್ಯಾರಿಕೇಡ್‌ಗಳು, ಪ್ರತಿಫಲಕ ಸೂಚನಾ ಫಲಕಗಳು ಮತ್ತು ಬ್ರೆತ್ ಅನಾಲೈಸರ್‌ಗಳೊಂದಿಗೆ ವಾಹನ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ; ಮದ್ಯಪಾನ ಚಾಲನೆಗೆ ಶೂನ್ಯ ಸಹಿಷ್ಣುತೆ ಪಾಲಿಸಿ ತಕ್ಷಣವೇ ಎಫ್‌ಐಆರ್ ದಾಖಲಿಸಿ ವಾಹನ ಜಪ್ತಿ ಮಾಡಿ, ನಿಯಮಾನುಸಾರ ಕ್ರಮ ಜರುಗಿಸುವುದು.
5. ಪಬ್ಲಿಕ್ ಅಡ್ರೆಸ್ ಸಿಸ್ಟಂ (ಧ್ವನಿವರ್ಧಕ) ಮೂಲಕ ಡೆಸಿಗ್ರೇಟೆಡ್ ಡ್ರೈವರ್‌ಗಳು ಮತ್ತು ರೈಡ್ ಶೇರಿಂಗ್‌ನ್ನು ಉತ್ತೇಜಿಸಿ, ನೈಟ್‌ಲೈಫ್ ವಲಯಗಳ ಸುತ್ತ ಹೆಚ್ಚುವರಿ ಗಸ್ತು ವ್ಯವಸ್ಥೆ ಏರ್ಪಡಿಸುವುದು ಸೂಕ್ತ.
6. 1,000ಕ್ಕಿಂತ ಹೆಚ್ಚು ಜನಸಮೂಹ ಸೇರಬಹುದಾದ ಸ್ಥಳಗಳಲ್ಲಿ ಪೆರಿಮೀಟರ್ ತಪಾಸಣೆ ಮತ್ತು ದೃಶ್ಯ ತಪಾಸಣೆ ಸೇರಿದಂತೆ ಇತರೆ ಅಪಾಯಗಳ ಕುರಿತು ಮೌಲ್ಯಮಾಪನ ಮಾಡಿ ಕ್ರಮ ಕೈಗೊಳ್ಳುವುದು.
7. ಮಹಿಳೆಯರನ್ನು ಚುಡಾಯಿಸುವುದನ್ನು ತಡೆಯಲು ಮಹಿಳಾ ಪೊಲೀಸ್ ತಂಡಗಳನ್ನು ನಿಯೋಜಿಸಿ; ಆಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳನ್ನು ಸಿದ್ಧ ಸ್ಥಿತಿಯಲ್ಲಿ ಇಟ್ಟು, ಸ್ಪಷ್ಟ ನಿರ್ಗಮನ ಮಾರ್ಗಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು, ಡೋನ್ ಮತ್ತು ಸಿಸಿಟಿವಿಗಳ ಮೂಲಕ ನೈಜ ಸಮಯದ ನಿಗಾವಣೆ ಮಾಡಿಕೊಳ್ಳುವುದು.
8. ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವಾಗುವಂತೆ ಜನಸಮೂಹದ ನಿಖರ ನಿಯಂತ್ರಣ ತಂತ್ರಗಾರಿಕೆಗಳು, ಬ್ಯಾರಿಕೇಡ್ ನಿಯೋಜನೆ, ನೈಜ ಸಮಯದ ಮೇಲ್ವಿಚಾರಣೆ ಮತ್ತು ನಿಯಂತ್ರಿತ ಪ್ರವೇಶ ಬಿಂದುಗಳ ಮೂಲಕ ಜನರ ಚಲನವನ್ನು ನಿರಂತರವಾಗಿರುವಂತೆ ನೋಡಿಕೊಳ್ಳುವುದು ಹಾಗೂ ಒಂದೇ ಕಡೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಕ್ರಮವಹಿಸುವುದು.
9. ಜನಸಮೂಹ ನಿರ್ವಹಣೆಗೆ ಸಂಬಂಧಿಸಿದಂತೆ ಈ ಕಚೇರಿಯಿಂದ ಹೊರಡಿಸಿರುವ ಎಸ್‌ಪಿ ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು, ಎಲ್ಲಾ ಕಾರ್ಯಕ್ರಮ ಆಯೋಜಕರೊಂದಿಗೆ ಪೂರ್ವಭಾವಿ ಸಭೆ ನಡೆಸಿ ನಿರ್ದೇಶನಗಳನ್ನು ನೀಡಿ, ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಹಾಗೂ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸುವುದು.
10. ಸಿಸಿಟಿವಿ, ಡೋನ್ ಮತ್ತು ನೈಜ ಸಮಯದ ಕ್ರೌಡ್ ಟ್ಯಾಕಿಂಗ್ ವ್ಯವಸ್ಥೆಗಳ ಮೂಲಕ ಜನಸಾಂದ್ರತೆಯ ಮೇಲ್ವಿಚಾರಣೆ, ವರ್ತನೆಯ ಸ್ವರೂಪ ಮತ್ತು ಒತ್ತಡಗಳು ಸಂಭವಿಸುವ ಸಾಧ್ಯತೆಗಳನ್ನು ನಿರ್ಧರಿಸಿ, ಅಗತ್ಯ ಕ್ರಮ ಕೈಗೊಳ್ಳುವುದು.
11. ಈ ಹಿಂದಿನ ದತ್ತಾಂಶ, ಸಾಮಾಜಿಕ ಮಾಧ್ಯಮ ಮತ್ತು ಜನರ ಹರಿವಿನ ವಿಶ್ಲೇಷಣೆಯ ಮೂಲಕ ಅಪಾಯಗಳನ್ನು ಊಹಿಸಲು ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಬಳಸಿಕೊಳ್ಳುವುದು.
12. ಜನರನ್ನು ಶಾಂತಗೊಳಿಸಲು ಅಥವಾ ಚಲನವಲನವನ್ನು ಮರುನಿರ್ದೇಶಿಸಲು ಸಾರ್ವಜನಿಕ ಘೋಷಣಾ ವ್ಯವಸ್ಥೆಗಳು (ಪಬ್ಲಿಕ್ ಅಡ್ರಸ್ ಸಿಸ್ಟಂ) ಮತ್ತು ಡಿಜಿಟಲ್ ಡಿಸ್ಟ್ ಗಳನ್ನು ಬಳಸಿ ಮಾಹಿತಿ ಬಿತ್ತರಿಸುವುದು.
13. ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ಚೆಕ್ ಪೋಸ್ಟ್ಗಳಲ್ಲಿ ನಿಯೋಜಿಸಿ, ಲೋಹ ಶೋಧಕಗಳು, ಬ್ಯಾಗ್ ತಪಾಸಣೆ ಮತ್ತು ಟಿಕೆಟ್ ಪರಿಶೀಲನೆಯೊಂದಿಗೆ ಪ್ರವೇಶವನ್ನು ನಿಯಂತ್ರಿಸಿ, ಅಪಾಯಗಳನ್ನು ಪತ್ತೆ ಹಚ್ಚುವ ಕ್ರಮಗಳನ್ನು ಕೈಗೊಳ್ಳುವುದು.
14. ಕಾರ್ಯಕ್ರಮಕ್ಕೂ ಮುನ್ನ ಅಪಾಯ ಮೌಲ್ಯಮಾಪನ, ಮಾಕ್ ಡ್ರಿಲ್‌ಗಳು ಮತ್ತು ಬ್ರಿಫಿಂಗ್‌ಗಳನ್ನು ನಡೆಸಿ ಸಿಬ್ಬಂದಿಗೆ ಪ್ರತಿಕ್ರಿಯಾ ಕ್ರಮಗಳ ಬಗ್ಗೆ ಸ್ಪಷ್ಟತೆ ನೀಡುವುದು. ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೋಚರವಾಗುವಂತಹ ರೀತಿಯಲ್ಲಿ ಅಧಿಕಾರಿ | ಸಿಬ್ಬಂದಿಗಳನ್ನು ಸೂಕ್ತ ಹಾಗೂ ಸೂಕ್ಷ್ಮ ಸ್ಥಳಗಳಿಗೆ ನಿಯೋಜಿಸುವುದು.
15. ಕರ್ತವ್ಯದಲ್ಲಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂರ್ಯಾಸ್ತದ ನಂತರ ಪ್ರತಿಫಲಕ ಜಾಕೆಟ್‌ಗಳನ್ನು ಕಡ್ಡಾಯವಾಗಿ ಧರಿಸುವುದು.
16. ಹೆಚ್ಚಿನ ಪಾದಚಾರಿಗಳ ಸಂಚಾರ ನಿರೀಕ್ಷಿತ ಸ್ಥಳಗಳಲ್ಲಿ ಮಹಿಳಾ ಸುರಕ್ಷತಾ ದ್ವೀಪಗಳನ್ನು ಸ್ಥಾಪಿಸುವುದು ಹಾಗೂ ಅಗತ್ಯ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸುವುದು.
17. ಜನಸಮೂಹದ ಮೇಲೆ ಪರಿಣಾಮಕಾರಿ ನಿಗಾವಹಣೆಗೆ ಎತ್ತರದ ವಾಚ್ ಟವರ್‌ಗಳನ್ನು ನಿರ್ಮಿಸುವುದು.
ಈ ನಿರ್ದೇಶನಗಳು ಪರಿಪೂರ್ಣವಾದ ಕ್ರಮಗಳಾಗಿರುವುದಿಲ್ಲ, ಆದರೆ, ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಮೇಲ್ಕಂಡ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುವಂತೆ ಸೂಚಿಸಲಾಗಿದೆ. ಮೇಲ್ಕಂಡ ನಿರ್ದೇಶನಗಳ ಪಾಲನೆಯಲ್ಲಿ ಲೋಪದೋಷನಿರ್ಲಕ್ಷತೆಗಳು ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು.


BREAKING: ಕನ್ನಡ ಪರ ಹೋರಾಟಗಾರರ ವಿರುದ್ಧದ ಕೇಸ್ ವಾಪಾಸ್: ಸಿಎಂ ಸಿದ್ಧರಾಮಯ್ಯ ಘೋಷಣೆ
BREAKING: ಬೆಂಗಳೂರಲ್ಲಿ ಕಾಲೇಜು ಹಿಂಭಾಗ ನವಜಾತ ಶಿಶು ಪತ್ತೆ: ನಿನ್ನೆ ಜನಿಸಿದ ಮಗು ಎಸೆದು ಹೋದ ದುರುಳರು








