ಕುಕ್ಕುಟ (ಕೋಳಿ) ಮತ್ತು ಜಾನುವಾರು (ಪಶು) ಆಹಾರ ತಯಾರಿಕಾ ಘಟಕಗಳು ಮತ್ತು ಮಾರಾಟ ಮಾಡುವ ಅಂಗಡಿ ಮತ್ತು ಸಂಘ ಸಂಸ್ಥೆಗಳು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸರಿಯಾದ ಗುಣಮಟ್ಟದ ಕೋಳಿ, ಜಾನುವಾರು ಆಹಾರ ಉತ್ಪಾದಿಸಲು ಮತ್ತು ಮಾರಾಟ ಮಾಡಲು ಪರವಾನಗಿ (ಲೈಸೆನ್ಸ್) ಪಡೆಯುವುದು ಕಡ್ಡಾಯವಾಗಿದೆ.
ಈಗಾಗಲೇ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಸ್ಥಳೀಯವಾಗಿ ಕೈಗಾರಿಕಾ ಇಲಾಖೆಯಿಂದ ಪರವಾನಗಿ ಪಡೆದಿದ್ದರೂ ಕೂಡ ಕರ್ನಾಟಕ ಕುಕ್ಕುಟ, ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ರ ಪ್ರಕಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಮತ್ತು ಈ ರೀತಿ ಪಡೆದ ಪರವಾನಗಿಯು ಪ್ರತಿ ವರ್ಷ ಡಿಸೆಂಬರ್-31 ಕ್ಕೆ ಮುಕ್ತಾಯವಾಗುವುದರಿಂದ ನವೀಕರಣವನ್ನು ಜನವರಿ-01 ರಿಂದ ಪಡೆಯಬೇಕಾಗಿರುತ್ತದೆ.
ಪ್ರಸ್ತುತ ವರ್ಷ 2024ನೇ ಸಾಲಿಗೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು ನೂತನ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಸೇವಾ ಸಿಂಧು ಎಂಬ ಜಾಲತಾಣವನ್ನು ಪ್ರಾರಂಭಿಸಲಾಗಿದ್ದು, ಕುಕ್ಕುಟ, ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು sevasinndhusevices.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಪರವಾನಗಿ ಪಡೆಯಲು ಕೋರಲಾಗಿದೆ.
ಪರವಾನಗಿ ಪಡೆಯದೆ ಕುಕ್ಕುಟ ಮತ್ತು ಜಾನುವಾರು ಆಹಾರ ಉತ್ಪಾದಕರು ಮತ್ತು ಮಾರಾಟಗಾರರು (ಉತ್ಪಾದನೆ ಮತ್ತು ಮಾರಾಟ ನಿಯಂತ್ರಣ) ಆಜ್ಞೆ 1987 ರ ಕಂಡಿಕೆ 8, 9(1) ಹಾಗೂ 11(1)(ಅ) ಪ್ರಕಾರ ನಿಯಮಾನುಸಾರ ಕ್ರಮವಹಿಸಲಾಗುವುದು. ಮತ್ತು ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಪಾಲನಾ ಇಲಾಖೆಯ ಸಂಸ್ಥೆಗಳನ್ನು ಸಂಪರ್ಕಿಸಬಹುದೆಂದು ಪರವಾನಗಿ ಪ್ರಾಧಿಕಾರ ಮತ್ತು ಉಪನಿರ್ದೇಶಕರು, ಜಿಲ್ಲಾ ಪಶು ಆಸ್ಪತ್ರೆ, ಪಾಲಿಕ್ಲಿನಿಕ್, ಕುವೆಂಪು ನಗರ, ಶಿವಮೊಗ್ಗದ ಡಾ. ಬಸವೇಶ ಹೂಗಾರ ಮೊ.ಸಂ– 9980253737 ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.