ಗಾಜಾ ಸಿಟಿ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೈನಿಕರು ಅಮಾನುಷತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತನ್ನ ತಂದೆಯಿಂದ ಬಲವಂತದ ತಪ್ಪೊಪ್ಪಿಗೆ ಪಡೆಯಲು, ಕೇವಲ 18 ತಿಂಗಳ (ಒಂದೂವರೆ ವರ್ಷ) ಹಸುಗೂಸನ್ನು ಇಸ್ರೇಲ್ ಪಡೆಗಳು ಬಂಧಿಸಿ, ಆ ಮಗುವಿನ ಮೇಲೆ ಸಿಗರೇಟ್‌ನಿಂದ ಸುಟ್ಟು ಮತ್ತು ಮೊಳೆಯಿಂದ ಚುಚ್ಚಿ ಚಿತ್ರಹಿಂಸೆ ನೀಡಿರುವ ವರದಿಯಾಗಿದೆ.
ಸೆಂಟ್ರಲ್ ಗಾಜಾದ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಬಳಿ ಓಸಾಮಾ ಅಬು ನಾಸರ್ ಎಂಬುವವರನ್ನು ಇಸ್ರೇಲ್ ಸೈನಿಕರು ಬಂಧಿಸಿದ್ದರು. ಈ ವೇಳೆ ಅವರ ಜೊತೆಗಿದ್ದ ಒಂದೂವರೆ ವರ್ಷದ ಮಗು ಕರೀಮ್ ಅನ್ನೂ ವಶಕ್ಕೆ ಪಡೆಯಲಾಗಿತ್ತು.
ವರದಿಗಳ ಪ್ರಕಾರ, ಓಸಾಮಾ ಅವರಿಂದ ಮಾಹಿತಿ ಪಡೆಯಲು ಸೈನಿಕರು ಅವರ ಎದುರೇ ಮಗುವಿನ ಕಾಲಿಗೆ ಉರಿಯುತ್ತಿರುವ ಸಿಗರೇಟ್‌ನಿಂದ ಸುಟ್ಟಿದ್ದಾರೆ. ಅಷ್ಟೇ ಅಲ್ಲದೆ, ಮಗುವಿನ ಕಾಲಿಗೆ ಮೊಳೆಯನ್ನು ಚುಚ್ಚಿ ತೀವ್ರವಾಗಿ ಗಾಯಗೊಳಿಸಿದ್ದಾರೆ ಎಂದು ಪ್ಯಾಲೆಸ್ತೀನ್ ಟಿವಿ ವರದಿ ಮಾಡಿದೆ.
10 ಗಂಟೆಗಳ ಕಾಲ ಮಗುವನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಇಸ್ರೇಲ್ ಪಡೆಗಳು ನಂತರ ರೆಡ್ ಕ್ರಾಸ್ ಮೂಲಕ ಮಗುವನ್ನು ಬಿಡುಗಡೆ ಮಾಡಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿನ ಕಾಲಿನ ಮೇಲೆ ಸಿಗರೇಟ್‌ನಿಂದ ಸುಟ್ಟ ಗುರುತುಗಳು ಮತ್ತು ಮೊಳೆಯಿಂದಾದ ಆಳವಾದ ಗಾಯಗಳು ಪತ್ತೆಯಾಗಿವೆ.
ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಈ ಘಟನೆಯನ್ನು ಖಂಡಿಸಿದ್ದು, “ಇಸ್ರೇಲ್ ಚಿತ್ರಹಿಂಸೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.








