ಜೆರುಸಲೇಂ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ ವಿಚಾರವಾಗಿ ಇರಾನ್ಗೆ ನೀಡಿದ್ದ ಗಡುವು ಹತ್ತಿರವಾಗುತ್ತಿರುವಂತೆಯೇ, ಇಸ್ರೇಲ್ ತನ್ನ ಆಕ್ರಮಣವನ್ನು ತೀವ್ರಗೊಳಿಸಿದೆ. ಇರಾನ್ನ ಪ್ರಮುಖ ಪೆಟ್ರೋಕೆಮಿಕಲ್ ಸ್ಥಾವರವೊಂದರ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಭೀಕರ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮತ್ತಷ್ಟು ಜೋರಾಗಿದೆ.
ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದ ಬೆನ್ನಲ್ಲೇ ನಡೆದ ಈ ದಾಳಿಯು ಜಾಗತಿಕ ಸಮುದಾಯದಲ್ಲಿ ಆತಂಕ ಮೂಡಿಸಿದೆ.
ಇರಾನ್ನ ಆರ್ಥಿಕತೆಗೆ ಬೆನ್ನೆಲುಬಾಗಿರುವ ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದಾಗಿ ಪ್ಲಾಂಟ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕ ಅಧ್ಯಕ್ಷರು ಇರಾನ್ಗೆ ನೀಡಿದ್ದ ಗಡುವು ಮಂಗಳವಾರಕ್ಕೆ (ಏಪ್ರಿಲ್ 7) ಮುಕ್ತಾಯವಾಗಲಿದೆ. ಅದಕ್ಕೂ ಮೊದಲೇ ಇಸ್ರೇಲ್ ಈ ದಾಳಿ ನಡೆಸಿರುವುದು, ಇರಾನ್ ಮೇಲೆ ಒತ್ತಡ ಹೇರುವ ತಂತ್ರವೆನ್ನಲಾಗಿದೆ.
ಈ ದಾಳಿಯನ್ನು ‘ಹೇಡಿತನದ ಕೃತ್ಯ’ ಎಂದು ಕರೆದಿರುವ ಇರಾನ್, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಸಿದೆ. ಇದು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ








