ಇರಾನ್ ಮೇಲಿನ ದಾಳಿಯ ಮೊದಲ ದೃಶ್ಯಗಳನ್ನು ಹಂಚಿಕೊಂಡ ಇಸ್ರೇಲಿ ವಾಯುಪಡೆಯು X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ, ಇದರಲ್ಲಿ ಕ್ಷಿಪಣಿ ಉಡಾವಣಾಕಾರಗಳು ಸೇರಿದಂತೆ ಮಿಲಿಟರಿ ಗುರಿಗಳನ್ನು ಹೊಡೆದುರುಳಿಸಲಾಗುತ್ತಿದೆ ಎಂದು ತೋರಿಸಲಾಗಿದೆ.
”ಇರಾನ್‌ನಲ್ಲಿ ವಾಯುಪಡೆಯ ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ, ಇರಾನ್‌ನಿಂದ ಇಸ್ರೇಲ್ ದೇಶದ ಭೂಪ್ರದೇಶದತ್ತ ಉಡಾವಣೆ ಮಾಡಲಾದ ಬೆದರಿಕೆಗಳನ್ನು (ಕ್ಷಿಪಣಿಗಳನ್ನು) ಹೊಡೆದುರುಳಿಸಲು ವಾಯು ರಕ್ಷಣಾ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ,” ಎಂದು ಇಸ್ರೇಲ್ ವಾಯುಪಡೆ ತಿಳಿಸಿದೆ.
ಹಲವು ತಿಂಗಳುಗಳಿಂದ ಎಚ್ಚರಿಕೆ ನೀಡುತ್ತಿದ್ದ ಇಸ್ರೇಲ್ ಮತ್ತು ಅಮೆರಿಕ ಶನಿವಾರ ಇರಾನ್ ಮೇಲೆ ದಾಳಿ ನಡೆಸಿವೆ. ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ಭಾಗಗಳಲ್ಲಿನ ಗುರಿಗಳ ಮೇಲೆ ದಾಳಿ ಮಾಡಲಾಗಿದೆ. ಆರಂಭಿಕ ದಾಳಿಗಳಲ್ಲಿ ಕೆಲವು, ಇರಾನ್ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಡೆದಿವೆ.
ದಕ್ಷಿಣ ಇರಾನ್‌ನ ಹಾರ್ಮೋಜ್‌ಗನ್ ಪ್ರಾಂತ್ಯದ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಇಸ್ರೇಲ್-ಅಮೆರಿಕ ನಡೆಸಿದ ದಾಳಿಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ‘ಇರ್ನಾ’ (IRNA) ವರದಿ ಮಾಡಿದೆ. ಮಿನಾಬ್ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳ ನೆಲೆಯನ್ನು ಹೊಂದಿದೆ.
ತನ್ನ ಪ್ರತಿ-ದಾಳಿಯಲ್ಲಿ ಇರಾನ್, ಬಹ್ರೇನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯನ್ನು (Fifth Fleet) ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದೆ. ಇರಾನ್‌ನ ಕ್ಷಿಪಣಿಗಳು ಇಸ್ರೇಲ್, ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ (UAE) ಮೇಲೆ ಕೂಡ ದಾಳಿ ನಡೆಸಿವೆ. ಯುಎಇ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ.
ಇರಾನ್‌ನಿಂದ ಎದುರಾಗಲಿರುವ “ತಕ್ಷಣದ ಬೆದರಿಕೆಗಳನ್ನು ನಿರ್ಮೂಲನೆ ಮಾಡುವುದು” ವಾಷಿಂಗ್ಟನ್‌ನ ಗುರಿಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಕಾರ್ಯಾಚರಣೆಯು “ಅಸ್ತಿತ್ವಕ್ಕೆ ಇರುವ ಬೆದರಿಕೆ”ಯನ್ನು ತೆಗೆದುಹಾಕಲು ಎಂದು ಹೇಳಿದ್ದಾರೆ.
”ನಾವು ಅವರ ಕ್ಷಿಪಣಿಗಳನ್ನು ನಾಶಪಡಿಸಲಿದ್ದೇವೆ ಮತ್ತು ಅವರ ಕ್ಷಿಪಣಿ ಉದ್ಯಮವನ್ನು ನೆಲಸಮ ಮಾಡಲಿದ್ದೇವೆ. ಅದನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗುವುದು. ನಾವು ಅವರ ನೌಕಾಪಡೆಯನ್ನು ಸರ್ವನಾಶ ಮಾಡಲಿದ್ದೇವೆ,” ಎಂದು ಟ್ರಂಪ್ ಗುಡುಗಿದ್ದಾರೆ.
ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು ಸೇರಿದಂತೆ ಅಲ್ಲಿನ ಸಶಸ್ತ್ರ ಪಡೆಗಳಿಗೆ ಅವರು ಒಂದು ಆಯ್ಕೆ ನೀಡಿದ್ದಾರೆ: “ಶರಣಾದರೆ ಕ್ಷಮಾದಾನ (Immunity), ಇಲ್ಲದಿದ್ದರೆ ಸಾವು ನಿಶ್ಚಿತ.” ಅಲ್ಲದೆ, ಇರಾನಿನ ಜನರಿಗೆ “ನಿಮ್ಮ ಸ್ವಾತಂತ್ರ್ಯದ ಸಮಯ ಹತ್ತಿರದಲ್ಲಿದೆ” ಎಂದು ಹೇಳುತ್ತಾ, ದಂಗೆ ಎದ್ದು “ನಿಮ್ಮ ಸರ್ಕಾರವನ್ನು ವಶಪಡಿಸಿಕೊಳ್ಳಿ” ಎಂದು ಅವರು ಕರೆ ನೀಡಿದ್ದಾರೆ.
🎥WATCH: IDF strikes hundreds of targets in western Iran as part of Operation Roaring Lion pic.twitter.com/KYMYVL8DOQ
— Israel Defense Forces (@IDF) February 28, 2026








