ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಅಸಿಫ್ ಅವರು ಇಸ್ರೇಲ್ ವಿರುದ್ಧ ನೀಡಿದ ಅತ್ಯಂತ ಕಟು ಮತ್ತು ವಿವಾದಾತ್ಮಕ ಹೇಳಿಕೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಇಸ್ರೇಲ್ ಅನ್ನು “ಮಾನವಕುಲಕ್ಕೆ ಶಾಪ” ಮತ್ತು “ಕ್ಯಾನ್ಸರ್ ಪೀಡಿತ ದೇಶ” ಎಂದು ಕರೆದಿರುವ ಅಸಿಫ್ ಹೇಳಿಕೆಯನ್ನು ಇಸ್ರೇಲ್ ಸರ್ಕಾರ ತೀವ್ರವಾಗಿ ಖಂಡಿಸಿದೆ.
ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ನಡುವೆ ಕದನ ವಿರಾಮದ ಕುರಿತು ಮಾತುಕತೆಗಳು ನಡೆಯುತ್ತಿರುವಾಗಲೇ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಖವಾಜಾ ಅಸಿಫ್, “ಒಂದೆಡೆ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇಸ್ರೇಲ್ ಲೆಬನಾನ್‌ನಲ್ಲಿ ನರಮೇಧ ನಡೆಸುತ್ತಿದೆ. ಇಸ್ರೇಲ್ ಒಂದು ಕೆಡುಕು ಮತ್ತು ಮಾನವಕುಲಕ್ಕೆ ಶಾಪ. ಯುರೋಪಿಯನ್ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ತೀನ್ ಭೂಮಿಯಲ್ಲಿ ಈ ಕ್ಯಾನ್ಸರ್ ಪೀಡಿತ ರಾಷ್ಟ್ರವನ್ನು ನಿರ್ಮಿಸಿದವರು ನರಕದಲ್ಲಿ ಸುಡಲಿ” ಎಂದು ಕಿಡಿಕಾರಿದ್ದರು.
ಪಾಕ್ ಸಚಿವನ ಈ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ತಕ್ಷಣವೇ ಪ್ರತಿಕ್ರಿಯೆ ನೀಡಿದೆ.
ನೆತನ್ಯಾಹು ಕಚೇರಿ: “ಇಸ್ರೇಲ್‌ನ ವಿನಾಶಕ್ಕೆ ಕರೆ ನೀಡಿರುವ ಈ ಹೇಳಿಕೆಯು ಅತ್ಯಂತ ಆಘಾತಕಾರಿ. ಶಾಂತಿ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ದೇಶವೊಂದರ ಸಚಿವರಿಂದ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ.”
ವಿದೇಶಾಂಗ ಸಚಿವ ಗಿಡಿಯಾನ್ ಸಾರ್: “ಇಸ್ರೇಲ್ ಅನ್ನು ಕ್ಯಾನ್ಸರ್ ಎಂದು ಕರೆಯುವುದು ಅದರ ಅಸ್ತಿತ್ವವನ್ನೇ ಅಳಿಸಲು ನೀಡಿದ ಕರೆಯಾಗಿದೆ. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸದಾ ಸಿದ್ಧವಾಗಿದೆ.”ಎಂದಿದ್ದಾರೆ.








