ವಿಜಯಪುರ: ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಬಳಿಕ ರಾಜ್ಯದಲ್ಲಿರುವ ಎಲ್ಲ ಹಿಂದುಳಿದ ಸಮುದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕಾಂಗ್ರೆಸ್ಸಿನವರು ಮತ್ತು ಸಿದ್ದರಾಮಯ್ಯನವರು ಹಿಂದುಳಿದ ಸಮುದಾಯಗಳನ್ನು ಮರೆತು ಕೇವಲ ಅಲ್ಪಸಂಖ್ಯಾತರ ಹಿಂದೆ ಹೋಗುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಲ್ಲಿ ಇಂದು ಜನಾಕ್ರೋಶ ಯಾತ್ರೆಯ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯನವರು ಈಚೆಗೆ ಬಜೆಟ್ ಮಂಡಿಸಿದರು. ಈ ರಾಜ್ಯದಲ್ಲಿ ಮುಸಲ್ಮಾನರಿಗೆ ಸರಕಾರಿ ಕಾಮಗಾರಿಗಳಲ್ಲಿ ಶೇ 4 ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ. ಮುಸಲ್ಮಾನರ ಹೆಣ್ಮಕ್ಕಳಿಗೆ ಮದುವೆಗೆ 50 ಸಾವಿರ ಕೊಡುವುದಾಗಿ ಹೇಳುತ್ತಾರೆ. ಮುಸಲ್ಮಾನ ಯುವಜನರು ವಿದೇಶಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋಗುವುದಾದರೆ 30 ಲಕ್ಷ ಧನಸಹಾಯ ನೀಡುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳೇ ಕೇವಲ ಮುಸಲ್ಮಾನರ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಹಿಂದೂ ಬಡ ಹುಡುಗಿಯರು ಇಲ್ಲವೇ? ಹಿಂದೂಗಳಲ್ಲಿ ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಹಿಂದೂ ಬಡ ಯುವಕರಿಗೆ ಇಲ್ಲವೇ ಎಂದು ಕೇಳಿದರು. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ; ಆದರೆ, ಲಜ್ಜೆಗೆಟ್ಟ ಕಾಂಗ್ರೆಸ್ಸಿನ ವರ್ತನೆಯನ್ನು ಮುಸಲ್ಮಾನರು ಯೋಚಿಸಬೇಕು ಎಂದು ಕಿವಿಮಾತು ಹೇಳಿದರು.
ಮುಸ್ಲಿಂ ಮಹಿಳೆಯರಿಗೆ ಗೌರವ ದೊರಕಿಸಿ ಕೊಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್ ಅನ್ನು ಕಿತ್ತು ಹಾಕಿದ್ದಾರೆ. ಯಡಿಯೂರಪ್ಪ ಅವರು ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆ, ಬೈಸಿಕಲ್ ಯೋಜನೆಯ ಫಲಾನುಭವಿಗಳು ಕೇವಲ ಹಿಂದೂಗಳಷ್ಟೇ ಅಲ್ಲ; ಮುಸಲ್ಮಾನರೂ ಅದರ ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ಆ ದೇಶದ್ರೋಹಿಗಳಿಗೆ ಸಿದ್ದರಾಮಯ್ಯರ ಸರಕಾರ ರಕ್ಷಣೆ ಕೊಟ್ಟಿತ್ತು. ಆದರೆ, ಅಂಥ ದೇಶದ್ರೋಹಿಗಳನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು. ಇದು ಬಿಜೆಪಿ ಎಂದು ಹೇಳಿದರು.
ಕಾಶ್ಮೀರದ ಉಗ್ರಗಾಮಿಗಳು ಬಿಜೆಪಿಗೆ ತಾಕತ್ತಿದ್ದರೆ ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸವಾಲು ಹಾಕಿದ್ದರು. ಬಿಜೆಪಿ ಕಾರ್ಯಕರ್ತರು ಆ ಸವಾಲನ್ನು ಸ್ವೀಕರಿಸಿ ಮುರಳಿ ಮನೋಹರ ಜೋಶಿಯವರ ನೇತೃತ್ವದಲ್ಲಿ ಕಾಶ್ಮೀರಕ್ಕೆ ತೆರಳಿ ಭಾರತದ ಧ್ವಜ ಹಾರಿಸಿದ್ದರು ಎಂದರು.
ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಧ್ಯೇಯದೊಂದಿಗೆ ನಮ್ಮ ಕಾರ್ಯಕರ್ತರು ಶ್ರಮ ಹಾಕುತ್ತಿದ್ದಾರೆ. ದೇಶದಲ್ಲಿ ಯುಪಿಎ ಸರಕಾರ ಇದ್ದಾಗ ದೇಶದಲ್ಲಿ ಅನೇಕ ಹಗರಣಗಳು ನಡೆದಿದ್ದವು. ಭಾರತಕ್ಕೆ ಭವಿಷ್ಯ ಇಲ್ಲ ಎಂಬ ಸ್ಥಿತಿಯಲ್ಲಿ ಯುವಕರಿದ್ದರು. ಆದರೆ, ಭಾರತಕ್ಕೂ ಉಜ್ವಲ ಭವಿಷ್ಯ ಇದೆ ಎಂಬುದನ್ನು ಸಾಬೀತುಪಡಿಸಿ ತೋರಿಸಿದವರು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಎಂದು ವಿಶ್ಲೇಷಿಸಿದರು.
ಭಾರತವು ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದು ನಮ್ಮ ಹೆಮ್ಮೆಯ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಎಂದು ಮೆಚ್ಚುಗೆ ಸೂಚಿಸಿದರು.
ಕಾಂಗ್ರೆಸ್ ಸುಡುವ ಮನೆ ಎಂದವರು ಅಂಬೇಡ್ಕರ್- ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅಂಬೇಡ್ಕರರಿಗೆ ಅತ್ಯಂತ ಹೆಚ್ಚು ಗೌರವ ಕೊಟ್ಟ ಪಕ್ಷ ಬಿಜೆಪಿ. ದಲಿತರ ಮೀಸಲಾತಿ ಹೆಚ್ಚಿಸಿದ್ದೇವೆ. ಪೌರಕಾರ್ಮಿಕರನ್ನು ಖಾಯಂ ಮಾಡಿದ್ದೇವೆ. ಕಾಂಗ್ರೆಸ್ ಸುಡುವ ಮನೆ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ದಲಿತ ಬಂಧುಗಳು ಅರ್ಥ ಮಾಡಿಕೊಂಡು ಬಿಜೆಪಿ ಜೊತೆಗೂಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಮಾಡಿದ ತಪ್ಪುಗಳನ್ನು ತಿದ್ದುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆ ಎಂದು ವಿವರಿಸಿದರು. ಸುಳ್ಳುಗಳನ್ನು ಹರಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಟೀಕಿಸಿದರು. ಬಾಬಾಸಾಹೇಬ ಡಾ.ಅಂಬೇಡ್ಕರರನ್ನು ಅಪಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸಬೇಕೇ ಎಂದು ಪ್ರಶ್ನಿಸಿದರು. ತ್ರಿವಳಿ ತಲಾಖ್ ರದ್ದು ಮಾಡಿದ ಪಕ್ಷ ಬಿಜೆಪಿ; ಬಿಜೆಪಿಯು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಸಂಸದ ರಮೇಶ್ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ ಬೆಳ್ಳುಬ್ಬಿ, ಶಾಸಕ ಹರೀಶ್ ಪೂಂಜಾ, ಮಾಜಿ ಶಾಸಕರಾದ ರಮೇಶ್ ಭೂಸನೂರ, ಸೋಮನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಪಿ.ಹೆಚ್. ಪೂಜಾರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಹೆಚ್. ಪಾಟೀಲ್ ನಡಹಳ್ಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ತಮ್ಮೇಶ್ ಗೌಡ, ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ, ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ, ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಬು ಮಾಶ್ಯಾಳ, ಈರಣ್ಣ ರಾವೂರ, ಬಬಲೇಶ್ವರ ಮುಖಂಡ ವಿಜುಗೌಡ ಪಾಟೀಲ, ಇಂಡಿ ಮುಖಂಡ ಕಾಸುಗೌಡ ಬಿರಾದಾರ, ನಾಗಠಾಣ ಮುಖಂಡ ಸಂಜೀವ ಐಹೊಳೆ, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪುನಃ ಜಾತಿಗಣತಿ ವರದಿ ಬಗ್ಗೆ ಚರ್ಚೆ: ಸಚಿವ ಶಿವರಾಜ್ ತಂಗಡಗಿ
GOOD NEWS : ರಾಜ್ಯದ ಮಹಿಳೆಯರಿಗೆ ಸಿಹಿಸುದ್ದಿ : ಇನ್ಮುಂದೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಬೇಕಿಲ್ಲ!