ಬೆಂಗಳೂರು: ಹತ್ಯೆ ಮತ್ತು ಆತ್ಮಹತ್ಯೆ ಕಾಂಗ್ರೆಸ್ ಸರಕಾರದ ಸಾಧನೆಯೇ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಒಂದು ವರ್ಷವನ್ನು ಪೂರ್ಣಗೊಳಿಸಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಿಗೆ ಹತ್ತಾರು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ ಎಂದು ನುಡಿದರು. ಈ ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಜೈನ ಮುನಿಗಳ ಹತ್ಯೆಯಿಂದ ಆರಂಭಗೊಂಡು ತಿಂಗಳಿಗೆ ಶತಕಗಳ ಗಡಿಯನ್ನು ಹತ್ಯೆ- ಆತ್ಮಹತ್ಯೆಯಲ್ಲಿ ದಾಟಿದೆ ಎಂದು ಆಕ್ಷೇಪಿಸಿದರು.
ಸಾವಿರಕ್ಕೂ ಹೆಚ್ಚು ಹತ್ಯೆ, ಸಾವಿರಕ್ಕೂ ಹೆಚ್ಚು ಆತ್ಮಹತ್ಯೆ ಸರಕಾರದ ಸಾಧನೆಯೇ ಎಂದು ಅವರು ಕೇಳಿದರು. ನ್ಯಾಷನಲ್ ಕ್ರೈಂ ಬ್ಯೂರೋ ರೆಕಾಡ್ರ್ಸ್ ಪ್ರಕಾರ ಕಳೆದ 4 ತಿಂಗಳಲ್ಲಿ ಕರ್ನಾಟಕದಲ್ಲಿ 430ಕ್ಕೂ ಹೆಚ್ಚು ಕೊಲೆಗಳು ನಡೆದಿವೆ ಎಂದು ವರದಿ ಹೇಳುತ್ತದೆ. ಕಳೆದ 10 ತಿಂಗಳಲ್ಲಿ 700ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ ಎಂದು ಸರಕಾರದ ವರದಿಯೇ ತಿಳಿಸಿದೆ. ರೈತರ ಆತ್ಮಹತ್ಯೆಯೇ 700 ಗಡಿ ದಾಟಿರಬೇಕಾದರೆ, 4 ತಿಂಗಳಲ್ಲಿ 400ಕ್ಕೂ ಹೆಚ್ಚು ಕೊಲೆಗಳು ನಡೆದಿರಬೇಕಾದರೆ ಈ ಸರಕಾರ ಹತ್ಯೆ ಮತ್ತು ಆತ್ಮಹತ್ಯೆಯಲ್ಲಿ ಪ್ರತಿ ತಿಂಗಳು ಶತಕಗಳ ಗಡಿಯನ್ನು ದಾಟಿದೆ. ಇದು ನಿಮ್ಮ ಸರಕಾರದ ಸಾಧನೆಯೇ ಎಂದು ಪ್ರಶ್ನಿಸಿದರು.
ಪ್ರತಿ ಕೊಲೆಗೂ ಒಂದು ಕಾರಣ ಇರುತ್ತದೆ ಎಂದು ರಾಜ್ಯದ ಗೃಹ ಸಚಿವರು ಹೇಳಿದ್ದಾರೆ. ಆದರೆ, ಸರಕಾರ ಇಂಥ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳುತ್ತದೆ ಎಂದ ಅವರು, ನಿಮ್ಮ ಸರಕಾರ ಸಂವೇದನಾರಹಿತವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು. ನಿಮ್ಮ ಸರಕಾರ ವಿಷಯಾಂತರ ಮಾಡುವ ಸಂಚು ನಡೆಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದೆಲ್ಲ ಮಾಮೂಲಿ ಎಂಬಂತೆ ಕೆಲಸ ಮಾಡಿದೆ ಎಂದು ದೂರಿದರು.
ಸಮಿತಿಗಳ ವರದಿ ವಿಳಂಬವೇಕೆ..?
ಈ ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ 40 ಶೇಕಡಾ ಕಮಿಷನ್‍ಗೆ ಸಂಬಂಧಿಸಿ ನಿವೃತ್ತ ನ್ಯಾಯಾಧೀಶ ನಾಗಮೋಹನ್‍ದಾಸ್ ಅವರ ಸಮಿತಿ ರಚಿಸಿತ್ತು. ಅಲ್ಲದೆ, ಒಂದು ತಿಂಗಳಲ್ಲಿ ವರದಿ ಕೊಡಲು ತಿಳಿಸಿತ್ತು. 9 ತಿಂಗಳಾಗಿದೆ. ಆದರೆ, ನಿಮ್ಮ ನ್ಯಾಯಾಧೀಶರು ವರದಿ ಕೊಟ್ಟಿಲ್ಲ. ಬಿಬಿಎಂಪಿ ಕಾಮಗಾರಿ ಕುರಿತ ತನಿಖೆ ನಡೆಸಲು ಇದೇ ಸಮಿತಿಗೆ ಜವಾಬ್ದಾರಿ ಕೊಟ್ಟಿದ್ದೀರಿ. ಆ ವರದಿಯೂ ಇನ್ನೂ ಬಂದಿಲ್ಲ. ತಡ ಆಗುತ್ತಿರುವುದಕ್ಕೆ ಕಾರಣ ಏನು ಎಂದು ಸಿ.ಟಿ.ರವಿ ಅವರು ಪ್ರಶ್ನಿಸಿದರು.
ನಾಗಮೋಹನ್‍ದಾಸ್ ಸಮಿತಿ, ಅವರ ಮೇಲೆ ಈ ಸರಕಾರಕ್ಕೆ ಅತಿ ಹೆಚ್ಚಿನ ನಂಬಿಕೆ ಇದೆ. ಎಲ್ಲದಕ್ಕೂ ನಿವೃತ್ತ ನ್ಯಾಯಾಧೀಶ ನಾಗಮೋಹನ್‍ದಾಸ್ ಅವರನ್ನೇ ನೇಮಿಸಲಾಗಿದೆ. ಕೋವಿಡ್ ಅಕ್ರಮ ತನಿಖೆಗೆ ಇನ್ನೊಂದು ಸಮಿತಿ ನೇಮಿಸಿದ್ದಾರೆ. 3 ತಿಂಗಳಲ್ಲಿ ವರದಿ ಕೋರಿದ್ದರು. ಆ ವರದಿ ಬಂದಿದೆಯೇ ಎಂದು ಕೇಳಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಲು ಜೂನ್ 2023ರಲ್ಲಿ ಆದೇಶ ಮಾಡಿದ್ದೀರಿ. 10 ತಿಂಗಳಾಗಿದೆ. ವರದಿ ಬಂದಿದೆಯೇ ಎಂದು ಅವರು ಕೇಳಿದರು. ಈ ಮಿಷನ್ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿದ್ದೀರಾ? ಪಾವತಿ ಮಾಡಿದ್ದರೆ ಎಷ್ಟು ಮೊತ್ತ ನೀಡಲಾಗಿದೆ ಎಂದೂ ಪ್ರಶ್ನೆಯನ್ನು ಮುಂದಿಟ್ಟರು.
ಬಿಬಿಎಂಪಿ ಗುತ್ತಿಗೆದಾರರು ತಮ್ಮ ಸರಕಾರದ ಮೇಲೆ ಶೇ 40 ಕಮಿಷನ್ ಆರೋಪ ಮಾಡಿದ್ದಾರೆ. ಈ ಆರೋಪವನ್ನೂ ನಾಗಮೋಹನ್‍ದಾಸ್ ಅವರ ಸಮಿತಿ ತನಿಖೆ ಮಾಡಲಿದೆಯೇ? ಬಿಟ್ ಕಾಯಿನ್ ಹಗರಣ ಎಸ್‍ಐಟಿಗೆ ವಹಿಸಿ 10 ತಿಂಗಳಾಗಿದೆ. ತನಿಖೆ ಯಾವಾಗ ಮುಕ್ತಾಯ ಆಗಲಿದೆ? ದೋಷಾರೋಪ ಪಟ್ಟಿ ಸಲ್ಲಿಸುವುದು ಯಾವಾಗ ಎಂದು ಕೇಳಿದರು.
ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಮತ್ತು ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಉಪಸ್ಥಿತರಿದ್ದರು.
ಆಹಾರ ಪ್ರಾಧಿಕಾರದ ಪರೀಕ್ಷೆಗಳಲ್ಲಿ ‘MDH, ಎವರೆಸ್ಟ್ ಮಸಾಲೆ ಮಾದರಿ’ಗಳು ಉತ್ತೀರ್ಣ : ಮೂಲಗಳು
BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು