ಬಾಗ್ದಾದ್: ಇರಾಕ್‌ನ ಸ್ವಾಯತ್ತ ಪ್ರದೇಶವಾದ ಕುರ್ದಿಸ್ತಾನ್‌ನ ಅಧ್ಯಕ್ಷ ನೆಚಿರ್ವಾನ್ ಬರ್ಜಾನಿ (Nechirvan Barzani) ಅವರ ಖಾಸಗಿ ನಿವಾಸವನ್ನು ಗುರಿಯಾಗಿಸಿಕೊಂಡು ಶನಿವಾರ ಭೀಕರ ಡ್ರೋನ್ ದಾಳಿ ನಡೆದಿದೆ. ದುಹೋಕ್ ಪ್ರಾಂತ್ಯದಲ್ಲಿರುವ ಅವರ ಮನೆಯ ಮೇಲೆ ಈ ದಾಳಿ ನಡೆದಿದ್ದು, ಕುರ್ದಿಸ್ತಾನ್ ಪ್ರಾದೇಶಿಕ ಸರ್ಕಾರ (KRG) ಇದನ್ನು ಅಧಿಕೃತವಾಗಿ ಖಚಿತಪಡಿಸಿದೆ.
ಶನಿವಾರ ಬೆಳಿಗ್ಗೆ ನಡೆದ ಈ ದಾಳಿಯಲ್ಲಿ ಸ್ಫೋಟಕಗಳನ್ನು ಹೊತ್ತ ಡ್ರೋನ್‌ಗಳನ್ನು ಬಳಸಲಾಗಿದೆ. ದಾಳಿಯ ವೇಳೆ ಅಧ್ಯಕ್ಷರ ನಿವಾಸಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆಯಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರ್ದಿಸ್ತಾನ್ ಪ್ರಧಾನಿ ಮಸ್ರೂರ್ ಬರ್ಜಾನಿ ಅವರು ಇದೊಂದು ‘ಹೇಡಿಗಳ ಕೃತ್ಯ’ ಎಂದು ಬಣ್ಣಿಸಿದ್ದಾರೆ. ಈ ಭಯೋತ್ಪಾದನಾ ದಾಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇರಾಕ್‌ನ ಕೇಂದ್ರ ಸರ್ಕಾರಕ್ಕೆ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಅವರು ಮನವಿ ಮಾಡಿದ್ದಾರೆ.
ತನಿಖೆಗೆ ಆದೇಶ: ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಲು ಫೆಡರಲ್ ಸರ್ಕಾರ ಮತ್ತು ಕುರ್ದಿಸ್ತಾನ್ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಜಂಟಿ ಭದ್ರತಾ ತಂಡವನ್ನು ರಚಿಸಲು ಆದೇಶಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಅಧ್ಯಕ್ಷ ಬರ್ಜಾನಿ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ ಮತ್ತು ಕುರ್ದಿಸ್ತಾನ್‌ನ ಭದ್ರತೆಗೆ ಫ್ರಾನ್ಸ್ ಸದಾ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.








