ಟೆಹ್ರಾನ್: ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ತಂದೆ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ, ಇರಾನ್ನ ನೂತನ ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಾಬಾ ಖಮೇನಿ ಅವರ ಮೊದಲ ವಿಡಿಯೋವನ್ನು ಇರಾನ್ನ ಸರ್ಕಾರಿ ಮಾಧ್ಯಮ (IRIB) ಶುಕ್ರವಾರ ಬಿಡುಗಡೆ ಮಾಡಿದೆ.
ಬಿಡುಗಡೆಯಾಗಿರುವ ವಿಡಿಯೋದಲ್ಲಿ ಮೊಜ್ತಾಬಾ ಖಮೇನಿ ಅವರು ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವುದು ಕಂಡುಬಂದಿದೆ. ಅವರು ಗಂಭೀರವಾಗಿ ಪಾಠ ಮಾಡುತ್ತಿದ್ದರೆ, ಶಿಷ್ಯರು ಅಷ್ಟೇ ಏಕಾಗ್ರತೆಯಿಂದ ಆಲಿಸುತ್ತಿದ್ದಾರೆ.
ಈ ವಿಡಿಯೋ ಯಾವ ದಿನಾಂಕದ್ದು ಎಂಬುದು ತಿಳಿದುಬಂದಿಲ್ಲ. ಇದನ್ನು ಹಳೆಯ ಆರ್ಕೈವ್ ವಿಡಿಯೋ ಎಂದು ಶಂಕಿಸಲಾಗಿದ್ದು, ಯುದ್ಧದ ನಡುವೆ ಅವರ ಆರೋಗ್ಯ ಮತ್ತು ಇರುವಿಕೆಯ ಬಗ್ಗೆ ಕೇಳಿಬರುತ್ತಿರುವ ವದಂತಿಗಳಿಗೆ ತೆರೆ ಎಳೆಯಲು ಸರ್ಕಾರ ಈ ವಿಡಿಯೋ ಬಳಸಿದೆ ಎನ್ನಲಾಗಿದೆ. ಫೆಬ್ರವರಿ 28 ರಂದು ನಡೆದ ದಾಳಿಯಲ್ಲಿ 86 ವರ್ಷದ ಅಲಿ ಖಮೇನಿ ಮೃತಪಟ್ಟಿದ್ದರು. ಇದಾದ ಬಳಿಕ 56 ವರ್ಷದ ಅವರ ಮಗ ಮೊಜ್ತಾಬಾ ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಯುದ್ಧ ಶುರುವಾದಾಗಿನಿಂದ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಮೊಜ್ತಾಬಾ ಅವರು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (IRGC) ಜೊತೆ ನಿಕಟ ಸಂಬಂಧ ಹೊಂದಿದ್ದು, ಸದ್ಯ ನಡೆಯುತ್ತಿರುವ ಇಸ್ರೇಲ್-ಅಮೆರಿಕ ವಿರುದ್ಧದ ಯುದ್ಧದಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ.
ಇರಾನ್ನ ಹೊಸ ನಾಯಕ ಸಜೀವವಾಗಿದ್ದಾರೆ ಮತ್ತು ಆಡಳಿತ ಸುಸೂತ್ರವಾಗಿ ನಡೆಯುತ್ತಿದೆ ಎಂಬ ಸಂದೇಶವನ್ನು ಜಗತ್ತಿಗೆ ನೀಡಲು ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.








