ತೆಹ್ರಾನ್/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ನಡುವೆ ಶಾಂತಿ ಸ್ಥಾಪಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳುಹಿಸಿದ್ದ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಅಮೆರಿಕದ ಪ್ರಸ್ತಾವನೆಯು “ಅತಾರ್ಕಿಕ ಮತ್ತು ಏಕಪಕ್ಷೀಯ” ಎಂದು ಕರೆದಿರುವ ಇರಾನ್, ಯುದ್ಧ ನಿಲ್ಲಿಸಲು ತನ್ನದೇ ಆದ 5 ಅಂಶಗಳ ಪ್ರತಿತಂತ್ರದ (Counter-plan) ಯೋಜನೆಯನ್ನು ಮುಂದಿಟ್ಟಿದೆ.
ಇರಾನ್ ಸರ್ಕಾರದ ಅಧಿಕೃತ ಮಾಧ್ಯಮಗಳ ಪ್ರಕಾರ, ಅಮೆರಿಕವು ಇರಾನ್‌ನ ಸಾರ್ವಭೌಮತ್ವವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. “ನಮಗೆ ಕೇವಲ ಕದನ ವಿರಾಮ ಬೇಡ, ನಮಗೆ ನ್ಯಾಯ ಬೇಕು” ಎಂದು ಇರಾನ್ ವಿದೇಶಾಂಗ ಇಲಾಖೆ ತಿಳಿಸಿದೆ. ಅಮೆರಿಕದ ಪ್ರಸ್ತಾವನೆಯಲ್ಲಿ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡುವಂತೆ ಕೇಳಲಾಗಿತ್ತು, ಇದನ್ನು ಇರಾನ್ ‘ಅಸಾಧ್ಯ’ ಎಂದು ತಳ್ಳಿಹಾಕಿದೆ.
ಅಮೆರಿಕ ಮತ್ತು ಇಸ್ರೇಲ್ ಈ ಕೆಳಗಿನ ಷರತ್ತುಗಳನ್ನು ಒಪ್ಪಿದರೆ ಮಾತ್ರ ಯುದ್ಧ ನಿಲ್ಲಿಸುವುದಾಗಿ ಇರಾನ್ ಹೇಳಿದೆ:ಇರಾನ್ ಅಧಿಕಾರಿಗಳ ಮೇಲಿನ ಹತ್ಯೆ ಯತ್ನ ಮತ್ತು ವಾಯುದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು.ಇತ್ತೀಚಿನ ಸಂಘರ್ಷದಲ್ಲಿ ಇರಾನ್‌ನ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿಗೆ ಅಮೆರಿಕ ಮತ್ತು ಇಸ್ರೇಲ್ ಭಾರಿ ಮೊತ್ತದ ದಂಡ ಪಾವತಿಸಬೇಕು. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಂಪೂರ್ಣ ಸಾರ್ವಭೌಮತ್ವವನ್ನು ಜಗತ್ತು ಮಾನ್ಯ ಮಾಡಬೇಕು.ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ದೇಶಗಳು ದಾಳಿ ಮಾಡದಂತೆ ಅಂತರಾಷ್ಟ್ರೀಯ ಮಟ್ಟದ ಲಿಖಿತ ಗ್ಯಾರಂಟಿ ಬೇಕು.ಯಾವುದೇ ಷರತ್ತುಗಳಿಲ್ಲದೆ ಇರಾನ್ ಮೇಲಿನ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಬೇಕು.








