ಟೆಹ್ರಾನ್: ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ 48 ಗಂಟೆಗಳ ಕಠಿಣ ಗಡುವನ್ನು (Ultimatum) ಇರಾನ್ ಸರ್ಕಾರವು ಅತ್ಯಂತ ತುಚ್ಛವಾಗಿ ತಳ್ಳಿಹಾಕಿದೆ. ಅಮೆರಿಕದ ಈ ನಡೆಯು ಅವರ “ಅಸಹಾಯಕತೆ” ಮತ್ತು “ಅಸಮತೋಲಿತ ಮಾನಸಿಕ ಸ್ಥಿತಿ”ಯನ್ನು ತೋರಿಸುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ವ್ಯಂಗ್ಯವಾಡಿದೆ.
“ಅಮೆರಿಕದ ಬೆದರಿಕೆಗಳಿಗೆ ಬೆದರಿ ನಾವು ನಮ್ಮ ಸಾರ್ವಭೌಮತ್ವವನ್ನು ಬಿಟ್ಟುಕೊಡುವುದಿಲ್ಲ. ಹಾರ್ಮುಜ್ ಜಲಸಂಧಿಯು ನಮ್ಮ ಆಯಕಟ್ಟಿನ ಪ್ರದೇಶವಾಗಿದ್ದು, ಅಲ್ಲಿನ ಭದ್ರತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ” ಎಂದು ಇರಾನ್ ಸರ್ಕಾರಿ ವಕ್ತಾರರು ಗುಡುಗಿದ್ದಾರೆ.
ಟ್ರಂಪ್ ಅವರ ಅಂತಿಮ ಗಡುವು ಕೇವಲ ರಾಜತಾಂತ್ರಿಕ ವಿಫಲತೆಯನ್ನು ಮುಚ್ಚಿಕೊಳ್ಳುವ ತಂತ್ರವಾಗಿದೆ. ಇದು ಜಾಗತಿಕ ಶಾಂತಿಗೆ ಅಮೆರಿಕವೇ ದೊಡ್ಡ ಕಂಟಕ ಎಂಬ ಅಂಶವನ್ನು ಸಾಬೀತುಪಡಿಸಿದೆ ಎಂದು ಇರಾನ್ ಆರೋಪಿಸಿದೆ.
ಅಮೆರಿಕವು ಇಸ್ರೇಲ್‌ನ ಪ್ರಚೋದನೆಗೆ ಒಳಗಾಗಿ ಇಂತಹ ಅವಿವೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಯುದ್ಧ ಸಂಭವಿಸಿದರೆ ಅದಕ್ಕೆ ಅಮೆರಿಕವೇ ನೇರ ಹೊಣೆಯಾಗಲಿದೆ ಎಂದು ಇರಾನ್ ಎಚ್ಚರಿಸಿದೆ.








