ಟೆಹ್ರಾನ್:ಲೆಬನಾನ್ ಮೇಲಿನ ದಾಳಿಯಿಂದ ಕೆರಳಿರುವ ಇರಾನ್, ಈಗ ಜಾಗತಿಕ ತೈಲ ಪೂರೈಕೆಯನ್ನೇ ಅಸ್ತ್ರವಾಗಿ ಬಳಸಲು ಮುಂದಾಗಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಂಚರಿಸುವ ಪ್ರತಿ ತೈಲ ಟ್ಯಾಂಕರ್‌ಗಳಿಗೆ ಇರಾನ್ ಈಗ ಪ್ರತಿ ಬ್ಯಾರೆಲ್‌ಗೆ 1 ಡಾಲರ್ ಸುಂಕವನ್ನು (Toll) ವಿಧಿಸಿದೆ. ಅಷ್ಟೇ ಅಲ್ಲದೆ, ಈ ಪಾವತಿಯನ್ನು ಕೇವಲ ಕ್ರಿಪ್ಟೋಕರೆನ್ಸಿ (Cryptocurrency) ಮೂಲಕವೇ ಮಾಡಬೇಕು ಎಂಬ ವಿಚಿತ್ರ ಷರತ್ತನ್ನು ವಿಧಿಸಿದೆ.
ಹಾರ್ಮುಜ್ ಜಲಸಂಧಿಯು ಇರಾನ್‌ನ ಸಮುದ್ರ ವ್ಯಾಪ್ತಿಗೆ ಬರುವುದರಿಂದ, ತನ್ನ ಜಲಪ್ರದೇಶವನ್ನು ಬಳಸುವ ಹಡಗುಗಳು ಈ ಸುಂಕ ಪಾವತಿಸುವುದು ಕಡ್ಡಾಯ ಎಂದು ಇರಾನ್ ಘೋಷಿಸಿದೆ. ಇದು ಜಾಗತಿಕವಾಗಿ ತೈಲ ಬೆಲೆ ಏರಿಕೆಗೆ ನೇರ ಕಾರಣವಾಗಲಿದೆ.
ಅಮೆರಿಕದ ಆರ್ಥಿಕ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಇರಾನ್ ಈ ಉಪಾಯ ಮಾಡಿದೆ. ಡಾಲರ್ ಅಥವಾ ಇತರ ಕರೆನ್ಸಿಗಳ ಬದಲಿಗೆ ಕೇವಲ ಡಿಜಿಟಲ್ ಕರೆನ್ಸಿ (ಕ್ರಿಪ್ಟೋ) ಮೂಲಕವೇ ಹಣ ಸಂದಾಯವಾಗಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.
ಈ ಸುಂಕವನ್ನು ಪಾವತಿಸುವ ಹಡಗುಗಳಿಗೆ ಮಾತ್ರ ಜಲಸಂಧಿಯಲ್ಲಿ ಸಂಚರಿಸಲು ಅನುಮತಿ ನೀಡಲಾಗುವುದು ಎಂದು ಇರಾನ್ ಕ್ರಾಂತಿಕಾರಿ ಪಡೆ (IRGC) ತಿಳಿಸಿದೆ. ಇದು ಕಳೆದ ಕೆಲವು ಗಂಟೆಗಳಿಂದ ಸ್ಥಗಿತಗೊಂಡಿದ್ದ ಹಡಗು ಸಂಚಾರಕ್ಕೆ ನೀಡಲಾದ ಪರ್ಯಾಯ ಮಾರ್ಗ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್‌ನ ಈ ನಡೆಯನ್ನು ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು “ಸಮುದ್ರ ದರೋಡೆ” ಎಂದು ಕರೆದಿವೆ. ಅಂತರಾಷ್ಟ್ರೀಯ ಜಲಮಾರ್ಗದಲ್ಲಿ ಸುಂಕ ವಿಧಿಸಲು ಇರಾನ್ ಆರ್ಥಿಕ ಹಕ್ಕು ಹೊಂದಿಲ್ಲ ಎಂದು ವಾದಿಸಿವೆ.








