ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಆವೃತ್ತಿಯು ಮಾರ್ಚ್ 21 ರಂದು ಪ್ರಾರಂಭವಾಗಲಿದೆ ಎಂದು ಅಧ್ಯಕ್ಷ ಅರುಣ್ ಧುಮಾಲ್ ಸೋಮವಾರ ಖಚಿತಪಡಿಸಿದ್ದಾರೆ
ಕಳೆದ ವರ್ಷ ನವೆಂಬರ್ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಒಟ್ಟು 182 ಆಟಗಾರರು 639.15 ಕೋಟಿ ರೂ.ಗೆ ಮಾರಾಟವಾಗಿದ್ದರು. ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಮುಂದಿನ ಕೆಲವು ದಿನಗಳಲ್ಲಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಧುಮಾಲ್ ದೃಢಪಡಿಸಿದರು.
“ನೋಡಿ, ಐಪಿಎಲ್ ಋತುವು ಮಾರ್ಚ್ನಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ 21ಕ್ಕೆ ಸಮಯ ನಿಗದಿಪಡಿಸಲಾಗಿದೆ. ಮತ್ತು ವೇಳಾಪಟ್ಟಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ಧುಮಾಲ್ ಸಂಸದ್ ಖೇಲ್ ಮಹಾಕುಂಭದ ಮೂರನೇ ಆವೃತ್ತಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಐಪಿಎಲ್ ನಿಯಮಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ, ಆದರೆ ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡು ಮೂರು ಪಂದ್ಯಗಳು ನಡೆಯಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.