ಮಂಡ್ಯ: ’87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024′ ರ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಸಭೆಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯಸಾನಿದ್ಯದಲ್ಲಿ ಚಾಲನೆ ನೀಡುವ ಮೂಲಕ ನಾಡುನುಡಿಯ ಹಬ್ಬಕ್ಕೆ ಮುನ್ನುಡಿ ಬರೆಯಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ, 87ನೇ ಕನ್ನಡ ಸಾಹಿತ್ಯ ಸಮ್ಮೇಳನದ 28 ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಸಭೆ ಜರುಗಿತು.
ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಸಭೆಯನ್ನುದ್ದೇಶಿಸಿ ಮಾತನಾಡಿ, ಇದು ಕನ್ನಡದ ಹಬ್ಬ. ಭಾಷೆಯ ಹಬ್ಬ. ಮಂಡ್ಯದಲ್ಲಿ ನೆರವೇರಲಿರುವ ಸಾಹಿತ್ಯ ಸಮ್ಮೇಳನ ನೆನಪಿನ ಉಳಿಯುವಂತಾಗಬೇಕು. ಕನ್ನಡ ಕಟ್ಟುವ ಹಬ್ಬವಾಗುವುದರ ಜೊತೆಗೆ ರಾಜ್ಯ ಮಾತ್ರವಲ್ಲದೆ ಇಂಡಿಯಾ ಕೂಡ ಮಂಡ್ಯದತ್ತ ತಿರುಗಿ ನೋಡವಂತಾಗಬೇಕು ಎಂದು ಕರೆಕೊಟ್ಟರು.
ಸಮ್ಮೇಳನದ ಯಶಸ್ವಿಗಾಗಿ ಸಲಹೆ, ಸೂಚನೆಗಳನ್ನು ಪಡೆಯಲು ಸಭೆ ಆಯೋಜಿಸಲಾಗಿದೆ. ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ‘ಬಾರಿಸು ಕನ್ನಡ ಡಿಂಡಿಮವ’ ಪದ್ಯದ ಸಾಲುಗಳನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ನಾಡ ಭಾಷೆ ಮರೆತರೆ ತಂದೆತಾಯಿಯನ್ನು ಮರೆತಂತೆ ಕನ್ನಡ ಎಲ್ಲಾ ರಂಗದವರಿಗೆ ತಲುಪಲು ಕೋರ್ಸ್ ಗಳು ಶುರುವಾಗಬೇಕು. ಕನ್ನಡದ ಕೂಗು ಹೆಚ್ಚಾದ ನಂತರ ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಕನ್ನಡ ಕಲಿಕೆ ಆರಂಭವಾಯಿತು. ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡಿದವರಿಗೆ ಕೆಲಸ ಸಿಗುವಂತಾಗಬೇಕು. ಕನ್ನಡದಲ್ಲಿ ಕಲಿತರೆ ಕೆಲಸ ಸಿಗುವಂತಾಗಬೇಕು. ಆಗ ಭಾಷೆ ಕಲಿಕೆಗೆ ಒಲವು ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಉದ್ಘಾಟನಾ ನುಡಿಗಳನ್ನಾಡಿದರು. ಕನ್ನಡ ಎಂದರೆ ಉತ್ಸಾಹ, ಚೈತನ್ಯ. ಮೂರನೇ ಬಾರಿ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಸಮಿತಿಗಳ ಸದಸ್ಯರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸರ್ಕಾರ, ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತು ಒಟ್ಟಿಗೆ ಕೆಲಸ ಮಾಡಿದರೆ ಸಮ್ಮೇಳನ ಯಶಸ್ವಿಯಾಗಿ ನೆರವೇರಲಿದೆ ಎಂದರು.
ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ರಾಜ್ಯದ ಮನೆಮಾತಾಗಬೇಕು. ಜಿಲ್ಲಾಡಳಿತ, ಸಾಹಿತ್ಯ ಪರಿಷತ್ತಿಗೆ ಸರ್ಕಾರದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಇದು ಕನ್ನಡದ ಹಬ್ಬ, ಎಲ್ಲೂ ಅಚಾತುರ್ಯ ಆಗದಂತೆ ನೋಡಿಕೊಳ್ಳಬೇಕು. ಮಂಡ್ಯದ ಕೀರ್ತಿ ಬೆಳಗುವ ಕೆಲಸ ಆಗಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ನಾಡೋಜ ಡಾ. ಮಹೇಶ್ ಜೋಶಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಡ್ಯ ಕನ್ನಡದ ಜಿಲ್ಲೆ. ಇಲ್ಲಿ ದೈವ ಸಂಕಲ್ಪ ಇದೆ. ಕರ್ನಾಟಕ ನಾಮಕರಣ ಆದ ನಂತರ ನಡೆದ ಮೊದಲ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನೆರವೇರಿತ್ತು ಎಂದರು.
ಇದು ಸಾಹಿತ್ಯ ಪರಿಷತ್ತು ಮಾಡುವ ಸಮ್ಮೇಳನ ಅಲ್ಲ. ಪ್ರತಿಯೊಬ್ಬ ಕನ್ನಡಿಗರು ಮಾಡುವ ಕನ್ನಡದ ಹಬ್ಬ. ಮಂಡ್ಯದಲ್ಲಿ ನಡೆಯುವ ಈ ಸಮ್ಮೇಳನ ಮುಂದಿನ ಸಮ್ಮೇಳನಗಳಿಗೆ ಮಾರ್ಗದರ್ಶಿ ಸೂಚಿಸುವ ಐತಿಹಾಸಿಕ ಸಮ್ಮೇಳನ ಆಗಬೇಕು. ನಮ್ಮ ಹಬ್ಬ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿ ಕನ್ನಡದ ರಥ ಎಳೆಯುವ ಕಾರ್ಯ ಮಾಡಬೇಕು. ಈ ಸಮ್ಮೇಳನದಲ್ಲಿ ನೆಲ, ಜಲ, ಭಾಷೆಯ ಭಾವನೆ ಬಡಿದ್ದೆಬ್ಬಿಸುವ ಕೆಲಸ ಮಾಡಲಾಗುತ್ತದೆ. ಕನ್ನಡ ಅನ್ನದ ಭಾಷೆ ಆಗಬೇಕು, ಆಡಳಿತ ಕನ್ನಡ ಆಗಬೇಕು ಎಂದರು.
ಮಾಜಿ ಶಾಸಕ ಅನ್ನದಾನಿ ಮಾತನಾಡಿ, ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ ಭಾಗಿಯಾಗಿದ್ದೇನೆ. ಕಾವೇರಿ ವಿಚಾರದ ತಿಕ್ಕಾಟ ಸೇರಿದಂತೆ ನೆಲ, ಜಲ, ಭಾಷೆ , ಸಂಸ್ಕೃತಿ ತೋರಿಸಲು ಸಾಹಿತ್ಯ ಹಬ್ಬ ಆಚರಿಸಲಾಗುತ್ತಿದೆ. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಚರ್ಚೆ, ವಿಚಾರ ಸಂವಾದಗಳು ಆಗಬೇಕು ಎಂದರು.
ಸಭೆಯಲ್ಲಿ ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕರುಗಳಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ವಿಧಾನಪರುಷತ್ ಸದಸ್ಯರುಗಳಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮೈಸೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಸಿ.ಡಿ.ಗಂಗಾಧರ್ ಸಮನ್ವಯ ಸಮಿತಿ ಅಧ್ಯಕ್ಷರಾದ ಮೀರ ಶಿವಲಿಂಗಯ್ಯ, ಮಾಜಿ ಸಚಿವ ಸೋಮಶೇಖರ್, ಮಾಜಿ ಶಾಸಕ ಅನ್ನದಾನಿ, ಮಾಜಿ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಸೇರಿದಂತೆ ಸಾಹಿತ್ಯ ಸಮ್ಮೇಳನ ಸಮಿತಿಗಳ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸದಸ್ಯರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಸಿಇಒ, ಎಡಿಸಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ತುಮಕೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಧಾರುಣ ಘಟನೆ: ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ದುರ್ಮರಣ
2036ರ ಒಲಿಂಪಿಕ್ಸ್‌ಗೆ ಭಾರತ ಸಿದ್ಧತೆ: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷಣೆ
BIGG NEWS: ‘KPTCL 226 ಜೆಇ ವರ್ಗಾವಣೆ’ಯಲ್ಲಿ ಮತ್ತೊಂದು ಕರ್ಮಕಾಂಡ: ಪುಲ್ ‘ಡೀಲ್ ಮಗಾ’ ಡೀಲ್