ಬೆಂಗಳೂರು : ಕ್ರೀಡಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲು ಬದ್ಧವಾಗಿದೆ. ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ಭಾಗ್ಯವನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಭಾನುವಾರ ಕೃಷ್ಣಾದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿoದ ಒಲoಪಿಕ್ಸ್, ಪ್ಯಾರಾಲಿoಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ ಗಳಲ್ಲಿ ಪದಕ ವಿಜೇತ 12ಮಂದಿ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿ ಮಾತನಾಡಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 2016-17ರ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಒಲಂಪಿಕ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟದ ಸಂದರ್ಭದಲ್ಲಿ, ಒಲಂಪಿಕ್ಸ್, ಏಶ್ಯಾಡ್ ಮತ್ತು ಕಾಮನ್‌ವೆಲ್ತ್‌ನಂತಹ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವ ಕ್ರೀಡಾಳುಗಳಿಗೆ ಸರ್ಕಾರಿ ನೌಕರಿ ಒದಗಿಸುವುದಾಗಿ ಘೋಷಣೆ ಮಾಡಿದ್ದೆ. ಸರ್ಕಾರ ಬದಲಾದ ಬಳಿಕ ಇದು ನೆನೆಗುದಿಗೆ ಬಿದ್ದಿತ್ತು. ಇದೀಗ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಮಾತ್ರ ಕ್ರೀಡಾ ಸಾಧಕರಿಗೆ ಉದ್ಯೋಗದಲ್ಲಿ ಶೇ.2ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿತ್ತು. ಇದೀಗ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ.3ರಷ್ಟು ಹುದ್ದೆಗಳನ್ನು ಹಾಗೂ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಸಾಧಕ ಕ್ರೀಡಾಪಟುಗಳಿಗೆ ಶೇ.2ರಷ್ಟು ಹುದ್ದೆಗಳನ್ನು ಮೀಸಲಿಡುವ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಶೀಘ್ರವೇ ಈ ಕುರಿತು ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಯುವ ಸಬಲೀಕರಣ ಇಲಾಖೆಯಲ್ಲಿ ಸಾಧಕ ಕ್ರೀಡಾಪಟುಗಳು ಹಾಗೂ ಅವರನ್ನು ರೂಪಿಸಿದ ತರಬೇತುದಾರರು ಮತ್ತು ದೈಹಿಕ ಶಿಕ್ಷಣ ಪರಿಣಿತರಿಗೂ ನೇಮಕಾತಿಗೆ ಅವಕಾಶ ಕಲ್ಪಿಸಿ ಭರ್ತಿ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಲಾಗಿದೆ ಎಂದರು.
ನೇಮಕಾತಿಗಾಗಿ ಕ್ರೀಡಾ ಸಾಧಕರಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಿದೆ. ಕ್ರೀಡೆಗಳಲ್ಲಿ ಸಾಧನೆ ಮಾಡುವ ಮೂಲಕ ನೀವೆಲ್ಲರೂ ದೇಶಕ್ಕೆ ಕೀರ್ತಿ ತಂದಿದ್ದೀರಿ. ನಿಮ್ಮ ಸಾಧನೆ ಗುರುತಿಸಿ, ಪ್ರೋತ್ಸಾಹ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ನಮ್ಮದು. ಒಲಂಪಿಕ್ಸ್ ನಂತಹ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಪರ್ಧಿಸಬೇಕೆಂಬುವುದು ನಮ್ಮ ಉದ್ದೇಶ. ಇದಕ್ಕೆ ಪೂರಕವಾದ ವಾತಾವರಣವನ್ನು, ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಅವರು ಹೇಳಿದರು.
ನೇಮಕಾತಿ ಪತ್ರ ಪಡೆದ ಕ್ರಿಡಾ ಸಾಧಕರ ವಿವರ
ಗಿರೀಶ್ ಎಚ್.ಎನ್ (ಪ್ಯಾರಾ ಅಥ್ಲೆಟಿಕ್ಸ್), ದಿವ್ಯಾ ಟಿ.ಎಸ್. (ಶೂಟಿಂಗ್), ಉಷಾರಾಣಿ ಎನ್. (ಕಬಡ್ಡಿ), ಸುಷ್ಮಿತಾ ಪವಾರ್ (ಕಬಡ್ಡಿ), ನಿಕ್ಕಿನ್ ತಿಮ್ಮಯ್ಯ (ಹಾಕಿ), ಎಸ್.ವಿ.ಸುನೀಲ್ (ಹಾಕಿ), ಕಿಶನ್ ಗಂಗೊಳ್ಳಿ (ಚೆಸ್), ರಾಘವೇಂದ್ರ ರತ್ನಾಕರ ಅಣ್ವೇಕರ್ (ಈಜು), ರಾಧಾ ವಿ. (ಪ್ಯಾರಾ ಅಥ್ಲೆಟಿಕ್ಸ್), ಶರತ್ ಎಂ.ಎಸ್ (ಪ್ಯಾರಾ ಅಥ್ಲೆಟಿಕ್ಸ್), ಗುರುರಾಜ (ವೇಯ್ಟ್ ಲಿಫ್ಟಿಂಗ್) ಮತ್ತು ಮಲಪ್ರಭಾ ಯಲ್ಲಪ್ಪ ಜಾಧವ (ಕುರಾಶ್) ಇವರಿಗೆ ನೇಮಕಾತಿ ಆಫರ್ ಲೆಟರ್ ನೀಡಿದರು.
ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ಫಿಕ್ಸ್: ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ
BREAKING: ದೆಹಲಿಗೆ ಬಂದಿಳಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ: IAF ಹಿರಿಯ ಅಧಿಕಾರಿಗಳಿಂದ ಸ್ವಾಗತ