ಮೈಸೂರು: ನೈಋತ್ಯ ರೈಲ್ವೆ ಮೈಸೂರು ವಿಭಾಗವು ರೈಲ್ವೆ ಮಂಡಳಿಯ ನಿರ್ದೇಶನದಂತೆ ಅಂತಾರಾಷ್ಟ್ರೀಯ ಮಟ್ಟದ ಲೆವಲ್ ಕ್ರಾಸಿಂಗ್ ಜಾಗೃತಿದಿನ (ILCAD) ಅನ್ನು 2025ರ ಜೂನ್ 5 ರಂದು ಆಚರಿಸಿತು. ಈ ಕಾರ್ಯಕ್ರಮದ ಉದ್ದೇಶ, ಮಾನವ ಸಹಿತ ಕ್ರಾಸಿಂಗ್ಗಳಲ್ಲಿ ರಸ್ತೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಿ ಅಪಘಾತಗಳನ್ನು ತಡೆಯುವುದು.
ಈ ಬಗ್ಗೆ ಮಾಹಿತಿ ನೀಡಿರುವಂತ ಮೈಸೂರು ನೈರುತ್ಯ ರೈಲ್ವೆ ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಅವರು, ಮೈಸೂರು ನಗರದ ಕೋಕ್ಕರಹಳ್ಳಿ ಲೆವಲ್ ಕ್ರಾಸಿಂಗ್ ಗೇಟ್ ಸಂಖ್ಯೆ 01 ರಲ್ಲಿ ಬೆಳಿಗ್ಗೆ 09:30 ಗಂಟೆಗೆ ಅಂತಾರಾಷ್ಟ್ರೀಯ ಮಟ್ಟದ ಲೆವೆಲ್ ಕ್ರಾಸಿಂಗ್ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದಿದ್ದಾರೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ (DRM) ಮುದಿತ್ ಮಿತ್ತಲ್, ಇತರ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ನೈಋತ್ಯ ರೈಲ್ವೆ ಮೈಸೂರು ವಿಭಾಗದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡವೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಸುರಕ್ಷತೆ ಕುರಿತ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರವಹಿಸಿತು ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುರಕ್ಷತಾ ಕರಪತ್ರಗಳ ವಿತರಣೆ, ರಸ್ತೆ ಬಳಕೆದಾರರೊಂದಿಗೆ ಸಂವಾದ, ಮತ್ತು ಲೆವಲ್ ಕ್ರಾಸಿಂಗ್ನಲ್ಲಿ ಪಾಲಿಸಬೇಕಾದ ಮಾಡುವ/ಮಾಡಬಾರದ ಕ್ರಮಗಳ ಪ್ರಾತ್ಯಕ್ಷಿಕೆಗಳು ಸೇರಿದ್ದವು. ಈ ಎಲ್ಲಾ ಕ್ರಮಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ರೈಲು ಸಾಗುವ ವೇಳೆ ಎಚ್ಚರಿಕೆ ವಹಿಸುವ ಉದ್ದೇಶವಾಗಿತ್ತು ಎಂದಿದ್ದಾರೆ.
ಮೈಸೂರು ವಿಭಾಗದವರು ಎಲ್ಲಾ ನಾಗರಿಕರನ್ನು ಲೆವಲ್ ಕ್ರಾಸಿಂಗ್ಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಎಲ್ಲರೂ ಸುರಕ್ಷತೆಯನ್ನು ಕಾಪಾಡಬೇಕು ಎಂದು ವಿನಂತಿಸಿದ್ದಾರೆ.