ಮಂಡ್ಯ : ಒಳ ಮೀಸಲಾತಿಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮದ್ದೂರು ತಾಲೂಕು ಕಚೇರಿ ಆವರಣದಲ್ಲಿ ಬಲಗೈ ಸಮುದಾಯ ಹೋರಾಟ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಿಂದ ತಮಟೆ ಚಳವಳಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆಗಮಿಸಿ ತಾಲೂಕು ಕಚೇರಿ ಎದುರು ಬೆಂಗಳೂರು – ಮೈಸೂರು ಹೆದ್ದಾರಿ ಸಂಚಾರ ತಡೆದ ನಂತರ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿ.ಪಂ ಮಾಜಿ ಅಧ್ಯಕ್ಷ ಕಂಠಿ ಸುರೇಶ್ ಮಾತನಾಡಿ, ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಅವರ ಅಧ್ಯಕ್ಷತೆಯ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಆಗಸ್ಟ್ 4. 2025 ರಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲದೇ ಬಲಗೈ ಸಮುದಾಯಕ್ಕೆ ಸೇರಿದ ಇನ್ನು ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ ಸಮುದಾಯದ ಜನ ಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿದೆ ಎಂದು ಆರೋಪಿಸಿದರು.
ಜಾತಿಯೇ ಅಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿಆಂದ್ರ ಸಮೂಹಕ್ಕೆ ಶೇ.1 ರಷ್ಟು ಮೀಸಲಾತಿ ನಿಗಧಿಪಡಿಸಿರುವುದನ್ನು ರದ್ದುಪಡಿಸಿ ಸದರಿ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ನ್ಯಾಯಮೂರ್ತಿ ಶ್ರೀ ನಾಗ ಮೋಹನ್ ದಾಸ್ ಅವರ ಆಯೋಗದ ವರದಿಯಲ್ಲಿರುವ ನ್ಯೂನ್ಯತೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಪರಿಷ್ಕರಣೆ ಮಾಡಲು ಇಬ್ಬರು ಮಾನವ ಶಾಸ್ತ್ರಜ್ಞರು ಒಳಗೊಂಡಂತೆ ಸಚಿವ ಸಂಪುಟ ಸಮಿತಿ ರಚಿಸಿ, ಉಪ ಸಮಿತಿ ಶಿಫಾರಸ್ಸಿನಂತೆ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕುಮಾರ್ ಕೊಪ್ಪ, ಸೋಮನಹಳ್ಳಿ ರಾಜೇಂದ್ರ, ಸಿದ್ದರಾಜು, ಕಬ್ಬಾಳಯ್ಯ, ನಿತ್ಯಾನಂದ, ಕಾಳಯ್ಯ, ಬೋರಯ್ಯ, ಶಂಕರ್, ಕೆಂಪಬೋರಯ್ಯ, ಯೋಗೇಶ್, ವನಿತಾ, ಪ್ರಮೀಳಾ, ಶಿವಲಿಂಗಯ್ಯ, ಮರಿಸ್ವಾಮಿ, ಚೌಡಯ್ಯ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ