ಬೆಂಗಳೂರು: ರಾಜ್ಯದ ರೈತರ ʻಕೃಷಿ ಸಾಲದ ಬಡ್ಡಿ ಮನ್ನಾʼ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದ್ದು, ನಡುವೆ ಸಾಲಮನ್ನಾ ಮಾಡುವುದಕ್ಕೆ ಸಂಬಂಧಪಟ್ಟಂತೆ ಷರತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದೆ.
ಅಂದ ಹಾಗೇ ರಾಜ್ಯದ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ಪಡೆದು 2023ರ ಡಿಸೆಂಬರ್ 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದ್ದಲ್ಲಿ ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ಅಧಿವೇಶನದಲ್ಲಿ ಘೋಷಣೆ ಮಾಡಿದ್ದರು. ಈಗ ಅದರಂತೆ ರಾಜ್ಯ ಸರ್ಕಾರವು ರೈತರ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ- ಕೃಷಿಯೇತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಲ್ಲಿ ಷರತ್ತುಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಷರತ್ತುಗಳೇನು?
- ಈ ಯೋಜನೆ ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ.
- ನಿಗದಿತ ಸಹಕಾರ ಸಂಘಗಳಲ್ಲದೇ ಇತರೆ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಯೋಜನೆ ಅನ್ವಯಿಸದು.
- ನಬಾರ್ಡ್ ಗುರುತಿಸಿದ ಕೃಷಿ / ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅಂದರೆ ಲಘು ನೀರಾವರಿ, ಭೂ ಅಭಿವೃದ್ಧಿ, ಸಾವಯವ ಕೃಷಿ, ಪಶು ಸಂಗೋಪನೆ, ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್, ತೋಟಗಾರಿಕೆ ಅಭಿವೃದ್ಧಿ ಉದ್ದೇಶಗಳಿಗೆ ಮಾತ್ರ ಈ ಯೋಜನೆ ಅನ್ವಯ.
- ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಬದ್ಧತೆಯಡಿ ವಿತರಿಸಿರುವ ಕೃಷಿ/ ಕೃಷಿ ಸಂಬಂಧಿತ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅನ್ವಯ.
- ಮಾರಟೊರಿಯಂ ಅವಧಿಯಲ್ಲಿ ಸುಸ್ತಿಯಾಗಿರುವ ಬಡ್ಡಿಗೂ ಅನ್ವಯ.