ಬೆಂಗಳೂರು : ರಾಜ್ಯಮಟ್ಟದ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 2026ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವ ಸಲುವಾಗಿ ಇಂದು ಜಿ.ಬಿ.ಎ ಕೇಂದ್ರ ಕಛೇರಿ ಸಭಾಂಗಣ–01 ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು. ಮೈದಾನದಲ್ಲಿ ಸುಮಾರು 100 ಲೋಡ್ ಗಳಷ್ಟು ಭಗ್ನಾವಶೇಷಗಳು ಇರುವುದರಿಂದ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಮೈದಾನ ಪ್ರದೇಶ ಧೂಳು ಹಬ್ಬದಂತೆ ನೀರು ಹಾಕಿ ರೋಲಿಂಗ್ ಮಾಡಬೇಕು. ನಾಗರಿಕರಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಶೌಚಾಲಯಗಳನ್ನು ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದ ದಿನ ಅತಿಥಿ ಗಣ್ಯರು, ಗಣ್ಯರು, ಅಧಿಕಾರಿಗಳು ಹಾಗೂ ನಾಗರಿಕರಿಗೆ ಸರಿಯಾದ ರೀತಿಯಲ್ಲಿ ಆಸನಗಳ ವ್ಯವಸ್ಥೆ ಮಾಡಬೇಕು. ಬಿಸಿಲಿನ ಹಿನ್ನೆಲೆಯಲ್ಲಿ ಸಮರ್ಪಕ ಪೆಂಡಾಲ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಯಾರು ಯಾವ ದ್ವಾರದಿಂದ ಪ್ರವೇಶಿಸಬೇಕು ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯ ಕುರಿತಾಗಿ ಯಾವುದೇ ಲೋಪಗಳು ಸಂಭವಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಗಣರಾಜ್ಯೋತ್ಸವ ನಡೆಯುವ ದಿನ ಕುಡಿಯುವ ನೀರು, ಅಗ್ನಿಶಾಮಕ ವ್ಯವಸ್ಥೆ, ಪೊಲೀಸ್ ಭದ್ರತೆ, ಸಿ.ಸಿ ಕ್ಯಾಮೆರಾ ಮೂಲಕ ಕಣ್ಗಾವಲು ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸಲು ನಿರ್ದೇಶನ ನೀಡಿದರು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ಡಾ: ಕೆ. ಹರೀಶ್ ಕುಮಾರ್, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಉಪ ಆಯುಕ್ತರಾದ ರವೀಂದ್ರ, ಜಂಟಿ ಆಯುಕ್ತರಾದ ಹೇಮಂತ್ ಶರಣ್ ಹಾಗೂ ಪೊಲೀಸ್, ಬೆಸ್ಕಾಂ, ಲೋಕೋಪಯೋಗಿ, ಜಲಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








