ಬೆಂಗಳೂರು: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಿವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶ ಮಾಡಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, 2023-24 ನೇ ಸಾಲ್ಲಿನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಯನ್ನು ಕಡ್ಡಾಯವಾಗಿ ಅಳವಡಿಸುವಂತೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಬೆಂಗಳೂರು ಇವರ ಉಲ್ಲೇಖ(1) ರಲ್ಲಿ ನೀಡಿದ ನಿರ್ದೇಶನದಂತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲು ಅಗತ್ಯ ಕ್ರಮ ವಹಿಸುವುದು ಕಡ್ಡಾಯವಾಗಿರುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿರುವ ಸಿಸಿಟಿವಿ ಕ್ಯಾಮರಾಗಳು ಸುಸ್ಥಿತಿಯಲ್ಲಿ ಇರುವ ಬಗ್ಗೆ ಪರಿಶೀಲಿಸಿ ದೃಢಪಡಿಸಿಕೊಳ್ಳಲು ಆಯಾ ಜಿಲ್ಲೆಯ ಉಪನಿರ್ದೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದಾಗಿ ಪರೀಕ್ಷಾ ಕೆಂದ್ರಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿ ದೃಢಪಡಿಸಿಕೊಳ್ಳತಕ್ಕದ್ದು ಎಂದಿದ್ದಾರೆ.
ಅಲ್ಲದೆ ಉಲ್ಲೇಖ (2) ರ ಸುತ್ತೋಲೆಯನ್ವಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕರುಗಳು ಪರೀಕ್ಷೆಗಾಗಿ ಕಚೇರಿಯನ್ನು ಮಾಡಿಕೊಂಡಿರುವ ಅಂದರೆ ಮಾರ್ಗಾಧಿಕಾರಿಗಳಿಂದ ಪ್ರಶ್ನೆಪತ್ರಿಕೆಗಳನ್ನು ಸ್ವೀಕರಿಸಿ ಅಲ್ವೇರಾದಲ್ಲಿಟ್ಟುಕೊಳ್ಳುವ, ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೊಠಡಿಗಳಿಗೆ ಹಂಚಿಕೆ ಮಾಡುವ ಹಾಗೂ ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್ ಮಾಡುವಂತಹ ಕಾರ್ಯಗಳನ್ನು ನಿರ್ವಹಿಸುವ ಕಚೇರಿಯ ಕೊಠಡಿಗೆ ಪರೀಕ್ಷಾ ಕೊಠಡಿ ಹಾಗೂ ಪರೀಕ್ಷಾ ಕೊಠಡಿಗಳ ಕಾರಿಡಾರ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಕಡ್ಡಾಯವಾಗಿದ್ದು, ಪರೀಕ್ಷಾ ದಿನದಂದು ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪರೀಕ್ಷಾ ಮುಖ್ಯ ಅಧೀಕ್ಷಕರು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು. ಎಲ್ಲಾ ವಿಷಯಗಳ ಪರೀಕ್ಷೆ ಮುಕ್ತಾಯವಾದ ದಿನದಂದು ಎಲ್ಲಾ ಪರೀಕ್ಷಾ ದಿನಗಳ ಸಿಸಿಟಿವಿ ಫುಟೇಜ್ ಸಾಪ್ಟಕಾಪಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಪರೀಕ್ಷಾ ಸಮಯದಲ್ಲಿ ಚಾಲನೆಯಲ್ಲಿರುವದನ್ನು ತಾಲೂಕಾ ಹಂತ ಹಾಗೂ ಜಿಲ್ಲಾ ಹಂತಗಳಲ್ಲಿ ಒಂದೇ ಕಡೆ ವೀಕ್ಷಿಸಲು ಅನುಕೂಲವಾಗುವಂತೆ ಸಾಪ್ಟವೇರ್ ಅಳವಡಿಸಿಕೊಂಡು ವೀಕ್ಷಣೆಗೆ ಸಂಬಂಧಿಸಿದ ಲಿಂಕ್‌ನ್ನು ಉಪನಿರ್ಧೇಶಕರು/ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಪ್ಪದೆ ಸಲ್ಲಿಸಲು ಕ್ರಮವಹಿಸುವುದು.
ಈ ರೀತಿ ಮೇಲ್ಕಾಣಿಸಿದ ಉಲ್ಲೇಖಿತ ಸುತ್ತೋಲೆಗಳಲ್ಲಿನ ಎಲ್ಲ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕಾರ್ಯವನ್ನು ಸುಗಮ ಮತ್ತು ಸುವ್ಯವಸ್ಥಿತವಾಗಿ ನಿರ್ವಹಿಸುವುದು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿದ ಕುರಿತು ಹಾಗೂ ಪರೀಕ್ಷೆಯ ಮುಂಜಾಗ್ರತೆಯ ಬಗ್ಗೆ ಕೈಗೊಂಡ ಕ್ರಮದ ಸಂಪೂರ್ಣ ದಾಖಲೆಗಳೊಂದಿಗೆ ವರಧಿಯನ್ನು ಈ ಕಛೇರಿಗೆ ತಪ್ಪದೆ ಸಲ್ಲಿಸಲು ಸೂಚಿಸಿದ್ದಾರೆ.