ಬೆಂಗಳೂರು : ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ – 2024 ಅನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ಡಿಜಿಟಲ್ ಜಾಹೀರಾತಿಗಾಗಿ ಡಿಜಿಟಲ್ ಜಾಹೀರಾತು ಏಜೆನ್ಸಿ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಎಂಪ್ಯಾನಲ್‌ಮೆಂಟ್ ಮಾಡಿಕೊಳ್ಳುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಏಜೆನ್ಸಿ ಮತ್ತು ಮಾಧ್ಯಮಗಳನ್ನು ನೊಂದಾಯಿಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲವು ವರ್ಷಗಳಿಂದ ಮಾಧ್ಯಮದ ವ್ಯಾಪ್ತಿ ಮತ್ತು ಸ್ವರೂಪ ಬದಲಾಗಿದೆ. ಅಂತರ್ಜಾಲ, ಖಾಸಗಿ ಕಂಪ್ಯೂಟರ್, ಸ್ಮಾರ್ಟ್ ಟಿವಿ ಹಾಗೂ ಸ್ಮಾರ್ಟ್ ಫೋನ್, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಜೊತೆಗೆ, ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಮಾದರಿಯಲ್ಲಿ ಡಿಜಿಟಲ್ ಜಾಹೀರಾತು ನೀಡಲು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿಯನ್ನು ಸರ್ಕಾರ ಹೊರತಂದಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಅನ್ವಯ ಎಲ್ಲಾ ಇಲಾಖೆಗಳು, ನಿಗಮಗಳು, ಪ್ರಾಧಿಕಾರಗಳು, ಮಂಡಳಿಗಳು, ಸ್ಥಳೀಯಾಡಳಿತಗಳು, ಪುರಸಭೆಗಳು, ನಗರ ಪಾಲಿಕೆಗಳು ಮೊದಲಾದವುಗಳಲ್ಲಿ ಡಿಜಿಟಲ್ ಜಾಹೀರಾತುಗಳನ್ನು ಕಡ್ಡಾಯವಾಗಿ ಈ ಮಾರ್ಗಸೂಚಿಗೆ ಅನುಸಾರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಬಿಡುಗಡೆ / ಪೂರೈಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಅನ್ವಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಾದ ಗೂಗಲ್ (ಯೂಟ್ಯೂಬ್), ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಬಿಸಿನೆಸ್, ವಾಟ್ಸಾಪ್ ಚಾನಲ್), ಸರ್ಚ್ ಇಂಜಿನ್‌ಗಳಾದ ಗೂಗಲ್, ಬಿಂಗ್, ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಈ ಹಿಂದೆ ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಲಿಂಕ್‌ಡ್‌ಇನ್, ವಾಟ್ಸಾಪ್, ಸ್ನಾಪ್‌ಚಾಟ್, ಟೆಲಿಗ್ರಾಂ, ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೇಜಾನ್ ಫ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಸೋನಿಲೈವ್, ಜಿಯೋ ಸಿನಿಮಾ, ಜೀ 5, ವೂಟ್, ಸನ್ ನೆಕ್ಸ್ಟ್ ಮತ್ತು ಟಾಕೀಸ್, ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಪೇಟಿಎಂ, ಪೋನ್‌ಪೇ ಮತ್ತು ಜಿಪೇ ಸೇರಿದಂತೆ ಇನ್ನಿತರ ಡಿಜಿಟಲ್ ವೇದಿಕೆಗಳಡಿ ಜಾಹೀರಾತು ಅರ್ಹ ಏಜೆನ್ಸಿಗಳ ಮೂಲಕ ನೀಡಲು ಅವುಗಳನ್ನು ಎಂಪ್ಯಾನಲ್ ಮಾಡಿಕೊಳ್ಳಲು ವಾರ್ತಾ ಇಲಾಖೆಯು ಉದ್ದೇಶಿಸಿದೆ.
ಹಾಗೆಯೇ, ಅಪ್ಲಿಕೇಶನ್ ಡೌನ್‌ಲೋಡ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಬರುವ ವೀಡಿಯೊ, ಡಿಸ್‌ಪ್ಲೇ ಮತ್ತು ಸರ್ಚ್ ಸೇರಿದಂತೆ ವಿವಿಧ ವೇದಿಕೆಗಳಡಿ ಜಾಹೀರಾತು ನೀಡಿಕೆ, ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಲ್ಲಿ ಕನಿಷ್ಠ 1 ಲಕ್ಷ ಡೌನ್‌ಲೋಡ್ ಹೊಂದಿರುವ ಯಾವುದೇ ಆಪ್ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವ ಯಾವುದೇ ಡಿಜಿಟಲ್ ಘಟಕ-ವೆಬ್ ಅಪ್ಲಿಕೇಶನ್ ಅಥವಾ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ವಿವಿಧ ಮೂಲಗಳಿಂದ ಸುದ್ದಿಗಳನ್ನು ಸಂಗ್ರಹಿಸಿ ಜನರಿಗೆ ನೀಡುವ ವೇದಿಕೆಗಳು. ಇನ್‌ಶಾರ್ಟ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿರುವ ಇನ್‌ಫ್ಲ್ಯುಯೆನ್ಸರ್‌ಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಜಾಹೀರಾತು ಪಡೆಯಲು ಅರ್ಹತೆ ಹೊಂದುತ್ತವೆ.
ಡಿಜಿಟಲ್ ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಬಯಸುವ ಏಜೆನ್ಸಿಗಳು ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ನೋಂದಣಿಯಾದ ಪ್ರೈವೇಟ್ ಲಿಮಿಟೆಡ್ ಕಂಪನಿ, ಪಬ್ಲಿಕ್ ಲಿಮಿಟೆಡ್ ಕಂಪನಿ, ಪಾಲುದಾರಿಕೆ, ಲಿಮಿಟೆಡ್ ಲಯಬಿಲಿಟಿ ಪಾಲುದಾರಿಕೆ ಹೊಂದಿರಬೇಕು. ಎಂಪ್ಯಾನೆಲಿಂಗ್ ಸಮಯದಲ್ಲಿ ಕನಿಷ್ಠ ಎರಡು ವರ್ಷವಾಗಿರಬೇಕು. ಜಿಎಸ್‌ಟಿ ನೋಂದಣಿ ಇರಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಚೇರಿ ಇರಬೇಕು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಇರಬೇಕು. ಡಿಜಿಟಲ್ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಬಗ್ಗೆ ಆಳವಾದ ಜ್ಞಾನವಿರಬೇಕು. ಸರ್ಕಾರಗಳಿಗೆ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಜಾಹೀರಾತು ನೀಡಲು ಗೂಗಲ್ ಅಥವಾ ಮೆಟಾ ಜೊತೆಗೆ ಮಾನ್ಯವಾದ ಒಪ್ಪಂದ/ಒಡಂಬಡಿಕೆ ಹೊಂದಿರಬೇಕು. ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸರ್ಕಾರದ ಜಾಹೀರಾತು ನೀಡಲು ಗೂಗಲ್ ಅಥವಾ ಮೆಟಾದಿಂದ ಅನುಮತಿ ಪಡೆದುಕೊಂಡಿರಬೇಕು ಎಂದು ಷರತ್ತುಗಳನ್ನು ನಿಗದಿ ಪಡಿಸಿದೆ.
ಡಿಜಿಟಲ್ ಮಾಧ್ಯಮ ಘಟಕಕ್ಕೆ ಅರ್ಹತೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಡಿಜಿಟಲ್ ಜಾಹೀರಾತು ನೀಡಲು ಎಂಪ್ಯಾನೆಲ್‌ಮೆಂಟ್‌ಗಾಗಿ ಡಿಜಿಟಲ್ ಮಾಧ್ಯಮ ಘಟಕವು ಭಾರತದ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು. ಕನಿಷ್ಠ ಒಂದು ವರ್ಷ ಕಾಲ ಯಾವುದೇ ಸಮಯದ ಅಂತರವಿಲ್ಲದೆ ನಿರಂತರವಾಗಿ ಕಂಟೆಂಟ್ ಪ್ರಕಟಿಸಿರಬೇಕು. ಜಿಎಸ್‌ಟಿ ನೋಂದಣಿ ಇರಬೇಕು.
ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ಅದರ ಏಜೆನ್ಸಿಗಳ ಎಲ್ಲ ಶಾಸನಬದ್ಧ ಅವಶ್ಯಕತೆಗಳನ್ನು ಅನುಸರಿಸಲು ವಿಫಲವಾದರೆ ಎಂಪ್ಯಾನೆಲ್ಮೆಂಟ್ ರದ್ದುಗೊಳಿಸಲಾಗುತ್ತದೆ. ಭಾರತದ ಕಾನೂನನ್ನು ಉಲ್ಲಂಘಿಸುವ ಪದ, ದೃಶ್ಯಗಳು, ಆಡಿಯೋ ಅಥವಾ ಅಂತಹ ಯಾವುದೇ ವಿಷಯವನ್ನು ಪ್ರಕಟಿಸಿರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಡಿಜಿಟಲ್ ಮಾಧ್ಯಮ ಘಟಕಗಳು ಮತ್ತು ಡಿಜಿಟಲ್ ಜಾಹೀರಾತು ಏಜೆನ್ಸಿಗಳು sevasindhu.karnataka.gov.in ಗೆ ಭೇಟಿ ನೀಡಿ, ನಿಗದಿ ಪಡಿಸಿರುವ ದಾಖಲಾತಿಗಳೊಂದಿಗೆ ಶುಲ್ಕ ಪಾವತಿಸಿ, ಮೇ 15ರ ಒಳಗೆ ಅರ್ಜಿ ಸಲ್ಲಿಸಲು ಕೋರಿದೆ.
BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್!