ಬೆಂಗಳೂರು: ಕಳಪೆ ರಸಗೊಬ್ಬರ, ಕಳಪೆ ಕೀಟನಾಶಕಗಳು ರೈತನ ಬದುಕನ್ನು ನಾಶ ಮಾಡುತ್ತಿವೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ಯಲಹಂಕದಲ್ಲಿರುವ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ (ICAR) 33ನೇ ಸಂಸ್ಥಾಪನಾ ದಿನಾಚರಣೆ ಹಾಗೂ 3ನೇ ಕೃಷಿ ಕೀಟ ಜೈವಿಕ ನಿಯಂತ್ರಣ ಪ್ರದರ್ಶನವನ್ನು ಉದ್ಘಾಟಿಸಿ ಕೇಂದ್ರ ಸಚಿವರು ಮಾತನಾಡಿದರು.
ಮನುಕುಲಕ್ಕೆ ಭೂಮಿ ಬಹಳ ಮುಖ್ಯ ಎಂಬುದನ್ನು ನಾವು ಮರೆಯಬಾರದು. ಮನುಷ್ಯನ ಆರೋಗ್ಯದಂತೆ ಭೂಮಿಯ ಆರೋಗ್ಯವು ಅತೀ ಮುಖ್ಯ. ಆದರೆ, ಕಳಪೆ ರಸಗೊಬ್ಬರ ಹಾಗೂ ಕೀಟನಾಶಕಗಳು ಮನುಷ್ಯ, ಭೂಮಿಯ ಆರೋಗ್ಯವನ್ನು ಹಾಳು ಮಾಡುತ್ತಿವೆ ಎಂದು ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತೆಂಗು ಬೆಳೆಗಾರರು ಕಷ್ಟದಲ್ಲಿ ಇದ್ದಾರೆ. ಕಪ್ಪುತಲೆ ಹುಳದ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ವತಃ ನನ್ನ ತೋಟವು ಈ ಸಂಕಷ್ಟಕ್ಕೆ ತುತ್ತಾಗಿದ್ದು, ತೆಂಗಿನ ಮರಗಳ ಗರಿಗಳು ಒಣಗುತ್ತಿವೆ. ಸ್ವತಃ ನಾನೇ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದು ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಹೆಚ್ಚು ಒತ್ತು ನೀಡಿದ್ದಾರೆ. ಹನ್ನೊಂದು ವರ್ಷಗಳ ಅವರ ಆಡಳಿತದಲ್ಲಿ ಕೃಷಿ ವಲಯಕ್ಕೆ ಹೆಚ್ಚು ಉತ್ತೇಜನ ಸಿಕ್ಕಿದೆ. ರಾಷ್ಟ್ರವು ಕೃಷಿಯಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತಿದೆ. ಪ್ರಧಾನಿಗಳಿಗೆ ರೈತರ ಬಗ್ಗೆ ಕಳಕಳಿ ಹೆಚ್ಚು, ರೈತರಿಗೆ ಆರ್ಥಿಕ ಶಕ್ತಿ ತುಂಬಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಸಚಿವರು ನುಡಿದರು.
ಬೇಳೆಕಾಳು ಬೆಳೆಯಲು ರೈತರು ಮುಂದಾಗಬೇಕು ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ. ಕೇವಲ ಅಕ್ಕಿಯಿಂದ ಪೌಷ್ಟಿಕಾಂಶ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ದ್ವಿದಳ ಧಾನ್ಯದಿಂದ ಪೌಷ್ಟಿಕಾಂಶಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿ ದ್ವಿದಳ ಧಾನ್ಯ ಉತ್ಪಾದನೆಗೆ ಮೋದಿ ಅವರು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಇದಕ್ಕಾಗಿ ಅವರು ₹35,000 ಕೋಟಿ ರೂ.ಗಳ ಯೋಜನೆಯನ್ನು ಘೋಷಣೆ ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್, ಐಸಿಎಆರ್ ನಿರ್ದೇಶಕ ಡಾ. ಸುಶೀಲ್ ಸೇರಿದಂತೆ ಅನೇಕ ಕೃಷಿ ವಿಜ್ಞಾನಿಗಳು, ವಿವಿಧ ಜಿಲ್ಲೆಗಳಿಂದ ಬಂದಿದ್ದ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಾಗೆಯೇ, ಪ್ರಗತಿಪರ ಹಾಗೂ ನಿಸರ್ಗ ಪ್ರೇರಿತ ಕೃಷಿ ಮಾಡುತ್ತಿರುವ ಅನೇಕ ರೈತರನ್ನು ಇದೇ ಸಂದರ್ಭದಲ್ಲಿ ಸಚಿವರು ಗೌರವಿಸಿದರು. ಜತೆಗೆ, ವಿಜ್ಞಾನಿಗಳ ಆವಿಷ್ಕಾರಗಳನ್ನು ಅನಾವರಣಗೊಳಿಸಿದರು.
ಮೊದಲ ಬಾರಿಗೆ, ಚಂದ್ರಯಾನ-2 ಚಂದ್ರನ ಮೇಲೆ ಸೂರ್ಯನ ಕರೋನಲ್ ಮಾಸ್ ಎಜೆಕ್ಷನ್ ಪರಿಣಾಮ ಗುರುತು | Chandrayaan-2
ಪ್ರತಿದಿನ ‘ನೆಲ್ಲಿಕಾಯಿ ಜ್ಯೂಸ್’ ಕುಡಿದ್ರೆ, ಹೃದ್ರೋಗ, ಕ್ಯಾನ್ಸರ್ ಬರೋದಿಲ್ವಂತೆ | Amla Benefits