ಲಂಡನ್: ಬ್ರಿಟನ್ನಿನ ದೈತ್ಯ ಕಂಪನಿಗಳಿಂದ ರಾಜ್ಯಕ್ಕೆ ಬಂಡವಾಳ ಆಕರ್ಷಿಸಿ, ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಕೈಗೊಂಡಿರುವ ಇಂಗ್ಲೆಂಡ್ ಪ್ರವಾಸ ಸೋಮವಾರದಿಂದ ಆರಂಭವಾಗಿದೆ. ಬುಧವಾರ ಕೊನೆಗೊಳ್ಳಲಿರುವ ಈ ಮೂರು ದಿನಗಳ ಪ್ರವಾಸದಲ್ಲಿ ಅವರು 20ಕ್ಕೂ ಹೆಚ್ಚು ಕಂಪನಿಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮೊದಲ ದಿನವಾದ ಸೋಮವಾರ ಅವರು ಅಗ್ರಗಣ್ಯ ಉದ್ಯಮ ಸಂಸ್ಥೆಗಳಾಗಿರುವ ಮಾರ್ಟಿನ್ ಬೇಕರ್, ಎಸ್.ಸಿ.ಐ ಸೆಮಿಕಂಡಕ್ಟರ್ಸ್, ಸ್ಯಾಮ್ಕೊ ಹೋಲ್ಡಿಂಗ್ಸ್, ಎ.ಆರ್.ಎಂ, ಲ್ಯಾಟೋಸ್ ಗ್ರೂಪ್, ವಿಯರ್ ಮತ್ತು ಎಡ್ವರ್ಡಿಯನ್ ಹೋಟೆಲ್ ಗ್ರೂಪ್ ಪ್ರಮುಖರನ್ನು ಭೇಟಿ ಮಾಡಿದರು. ಈ ಪ್ರವಾಸ ಕಾರ್ಯಕ್ರಮ ಮೂರು ತಿಂಗಳ ಹಿಂದೆಯೇ ನಿಗದಿಯಾಗಿತ್ತು.
ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ಕೈಗಾರಿಕಾ ಕಾರ್ಯ ಪರಿಸರ, ಮೂಲಸೌಕರ್ಯ, ಭೂಮಿಯ ಲಭ್ಯತೆ, ವಿಷನ್ ಗ್ರೂಪ್ ಚಿಂತನೆ, ಇನ್ವೆಸ್ಟ್ ಕರ್ನಾಟಕ ಫೋರಂನ ಉದ್ದೇಶ, ಪ್ರವರ್ಧಮಾನಕ್ಕೆ ಬರುತ್ತಿರುವ ಆಧುನಿಕ ಉದ್ದಿಮೆಗಳು, ರಫ್ತುಕೇಂದ್ರಿತ ಕೈಗಾರಿಕಾ ನೀತಿ, ಕೊಡಲಾಗುವ ರಿಯಾಯಿತಿ/ವಿನಾಯಿತಿ ಮತ್ತು ಪ್ರೋತ್ಸಾಹನಾ ಭತ್ಯೆಗಳನ್ನು ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವೈಮಾಂತರಿಕ್ಷ ಕ್ಷೇತ್ರದಲ್ಲಿ ಹೆಸರಾಗಿರುವ ಮಾರ್ಟಿನ್ ಬೇಕರ್ ಕಂಪನಿಯ ಪ್ರತಿನಿಧಿಗಳ ಜತೆಗಿನ ಮಾತುಕತೆ ಸಕಾರಾತ್ಮಕವಾಗಿತ್ತು. ಅವರಿಗೆ ರಾಜ್ಯದಲ್ಲಿ ತಮ್ಮದೊಂದು ತಯಾರಿಕಾ ಘಟಕವನ್ನು ಸ್ಥಾಪಿಸುವಂತೆ ಚರ್ಚಿಸಲಾಗಿದೆ. ಅವರು ಕೂಡ ತಮ್ಮ ಕಂಪನಿಯ ಪರಂಪರೆ, ವಿನ್ಯಾಸ ಮತ್ತು `ಎಜೆಕ್ಷನ್ ಸೀಟ್’ ತಯಾರಿಕೆಯಲ್ಲಿ ಸಾಧಿಸಿರುವ ತಾಂತ್ರಿಕ ಪರಿಣತಿ ಹಾಗೂ ಜಾಗತಿಕ ಮಟ್ಟದಲ್ಲಿ ಹೊಂದಿರುವ ಸ್ಥಾನಮಾನವನ್ನು ವಿವರಿಸಿದ್ದಾರೆ. ಜತೆಗೆ ಕರ್ನಾಟಕದಲ್ಲಿರುವ ಕೈಗಾರಿಕಾ ವ್ಯವಸ್ಥೆ, ಪ್ರತಿಭಾಪೂರ್ಣ ಮಾನವ ಸಂಪನ್ಮೂಲ ಮತ್ತು ಏರೋಸ್ಪೇಸ್ ಹಾಗೂ ರಕ್ಷಣಾ ವಲಯಗಳಿಗೆ ನಾವು ಒದಗಿಸಿರುವ ಮೂಲಸೌಕರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ನುಡಿದಿದ್ದಾರೆ.
ಈ ಮಾತುಕತೆಯಲ್ಲಿ ಮಾರ್ಟಿನ್ ಬೇಕರ್ ಕಂಪನಿಯ ಪರವಾಗಿ ಅದರ ನಿರ್ದೇಶಕ ಮತ್ತು ಹಿರಿಯ ಉಪಾಧ್ಯಕ್ಷ ಆ್ಯಂಡ್ರೂ ಮಾರ್ಟಿನ್, ಸಿಎಫ್ಒ ರಾಬರ್ಟ್ ಮಾರ್ಗನ್, ವಾಣಿಜ್ಯ ವ್ಯವಹಾರಗಳ ಮುಖ್ಯಸ್ಥ ಬ್ರಿಯಾನ್ ಪೋವೆಲ್ ಭಾಗವಹಿಸಿದ್ದರು.
ಎರಡನೇ ದಿನ ಗ್ರೀನ್ ಜೆಟ್ಸ್, ನಥಿಂಗ್ ಜತೆ ಮಾತುಕತೆ
ಎರಡನೇ ದಿನವಾದ ಮಂಗಳವಾರ ಎಂಬಿಡಿಎ, ಎಲಿಮೆಂಟ್ 6 ಯುಕೆ, ಗ್ರೀನ್ ಜೆಟ್ಸ್, ಫಿಡೋ ಎಐ, ನಥಿಂಗ್, ರೋಡ್ಸ್ ಗ್ರೂಪ್, ಜಿ.ಎನ್.ಕೆ ಅಂಡ್ ಮೆಲ್ರೋಸ್ ಕಂಪನಿಗಳ ಮುಖ್ಯಸ್ಥರು/ಸಿಇಒಗಳೊಂದಿಗೆ ಹೂಡಿಕೆ ಕುರಿತು ಇಲ್ಲಿನ ಫೋರ್ ಸೀಸನ್ ಹೋಟೆಲಿನಲ್ಲಿ ಮಾತುಕತೆ ನಡೆಸಲಾಗುವುದು. ಸಂಜೆ ಯುನೈಟೆಡ್ ಕಿಂಗಡಮ್ ಮತ್ತು ಭಾರತ ವಾಣಿಜ್ಯ ಸಮಿತಿ ಆಯೋಜಿಸಿರುವ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದರಲ್ಲಿ ಹಲವು ಕಂಪನಿಗಳೊಂದಿಗೆ ಎರಡು ಸುತ್ತಿನಲ್ಲಿ ಸಭೆಗಳು ನಿಗದಿಯಾಗಿವೆ ಎಂದು ಅವರು ವಿವರಿಸಿದ್ದಾರೆ.
ಮೂರನೆಯ ಮತ್ತು ಅಂತಿಮ ದಿನವಾದ ಬುಧವಾರ ಆಕ್ಸಫರ್ಡ್ ಸ್ಪೇಸ್ ಸಿಸ್ಟಮ್ಸ್, ಮೂಗ್, ಬ್ರಿಟಿಷ್ ಚೇಂಬರ್ ಆಫ್ ಕಾಮರ್ಸ್ ಮತ್ತು ಸೆನೆಟರ್ ಗ್ರೂಪ್ ಕಂಪನಿಗಳೊಂದಿಗೆ ಸಭೆಗಳನ್ನು ನಡೆಸಲಾಗುವುದು. ಈ ಮೂಲಕ ಕರ್ನಾಟಕದ ಕೈಗಾರಿಕಾ ವಲಯಕ್ಕೆ ಹೆಚ್ಚು ಬಂಡವಾಳ ಹರಿವನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಖ್ಯವಾಗಿ ರಾಜ್ಯದ ಕೈಗಾರಿಕಾ ವಲಯವು ಈಗ ಸ್ಥಳೀಯ ತಯಾರಿಕೆ ಮತ್ತು ರಫ್ತು ವಹಿವಾಟಿಗೆ ಒತ್ತು ಕೊಡುತ್ತಿದೆ. ಅದರಲ್ಲೂ ವಿದ್ಯುತ್ ಚಾಲಿತ ವಾಹನ ತಯಾರಿಕೆ, ಸೆಮಿಕಂಡಕ್ಟರ್, ಮರುಬಳಕೆ ಇಂಧನ, ಪರಿಸರಸ್ನೇಹಿ ಇಂಧನ, ವೈಮಾಂತರಿಕ್ಷ ಮತ್ತು ರಕ್ಷಣೆ, ಬಾಹ್ಯಾಕಾಶ ಮುಂತಾದ ಆಧುನಿಕ ಉದ್ದಿಮೆಗಳಿಗೆ ಒತ್ತು ನೀಡಲಾಗುತ್ತಿದೆ ಎನ್ನುವುದನ್ನು ಯುನೈಟೆಡ್ ಕಿಂಗಡಮ್ ನ ಕಂಪನಿಗಳಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದು ಪಾಟೀಲ ನುಡಿದಿದ್ದಾರೆ. ಸಚಿವರು ಇತ್ತೀಚೆಗೆ ಕೈಗೊಂಡಿದ್ದ ಜಪಾನ್ ಪ್ರವಾಸದ ವೇಳೆ ರಾಜ್ಯಕ್ಕೆ 4,500 ಕೋಟಿ ರೂ. ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿರುವುದನ್ನು ಇಲ್ಲಿ ನೆನೆಯಬಹುದು.
ಸಚಿವರ ನೇತೃತ್ವದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಇದ್ದಾರೆ.
‘ಹ್ಯಾಕಥಾನ್’ನಲ್ಲಿ ‘VTU ವಿದ್ಯಾರ್ಥಿ’ಗಳಿಂದ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿ ಮಹತ್ವದ ಸಾಧನೆ
ಈ ಎರಡು ಎಲೆಗಳು ಮನೆಯಲ್ಲಿದ್ದರೆ ಸಾಕು, ಎಲ್ಲ ದೋಷಗಳು, ದುಷ್ಟಶಕ್ತಿಗಳು ಓಡಿ ಹೋಗುತ್ತವೆ








