ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಜನತೆಗೆ ವಿಮಾನಯಾನ ಸಂಸ್ಥೆ ಇಂಡಿಗೋ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಇಂಡಿಗೋ ಸಂಸ್ಥೆಯು, ಮೇ 1ರಿಂದ ಶಿವಮೊಗ್ಗದಿಂದ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸುವ ಮುನ್ಸೂಚನೆ ನೀಡಿದೆ.
ಟಿಕೆಟ್ ಬುಕ್ಕಿಂಗ್ ಲಭ್ಯವಿಲ್ಲ: ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ಇಂಡಿಗೋ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಏಪ್ರಿಲ್ 30ರ ವರೆಗೆ ಮಾತ್ರ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಮೇ 1ರಿಂದ ಮುಂದಿನ ದಿನಾಂಕಗಳಿಗೆ ಯಾವುದೇ ಬುಕ್ಕಿಂಗ್ ಲಭ್ಯವಿಲ್ಲದಿರುವುದು ಪ್ರಯಾಣಿಕರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ.
ಸೇವೆ ಸ್ಥಗಿತಕ್ಕೆ ಕಾರಣವೇನು? ಇತ್ತೀಚೆಗೆ ನಡೆದ ವಿಮಾನ ದುರಂತಗಳ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪೈಲಟ್‌ಗಳ ಕೆಲಸದ ಅವಧಿ ಮತ್ತು ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಕಠಿಣಗೊಳಿಸಿದೆ. ಈ ಹೊಸ ನಿಯಮಗಳಿಂದಾಗಿ ಇಂಡಿಗೋ ಸಂಸ್ಥೆಯಲ್ಲಿ ಪೈಲಟ್‌ಗಳ ಕೊರತೆ ಎದುರಾಗಿದೆ ಎನ್ನಲಾಗುತ್ತಿದೆ. ಈ ತಾಂತ್ರಿಕ ಕಾರಣದಿಂದಾಗಿ ಸಂಸ್ಥೆಯು ಸಣ್ಣ ನಗರಗಳಿಗೆ ಸಂಪರ್ಕ ಕಲ್ಪಿಸುವ ಎಟಿಆರ್ (ATR) ವಿಮಾನಗಳ ಸೇವೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ ವಿಮಾನ ನಿಲ್ದಾಣವು ಇತ್ತೀಚೆಗಷ್ಟೇ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ ಈಗ ಹಠಾತ್ ಆಗಿ ಸೇವೆ ಸ್ಥಗಿತಗೊಳ್ಳುವ ಮುನ್ಸೂಚನೆ ಸಿಕ್ಕಿರುವುದು ಜಿಲ್ಲೆಯ ಜನರಿಗೆ ಹಾಗೂ ಉದ್ಯಮಿಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಹೊರಬರಬೇಕಿದೆ.








