ಭಾರತೀಯ ವಿವಾಹಗಳಲ್ಲಿ ‘ಪರ್ಫೆಕ್ಟ್ ಲುಕ್’ ಪಡೆಯಲು ವಧು-ವರರು ಜಿಮ್, ಡಯಟ್ ಮಾಡುವುದು ಹಳೆಯ ಮಾತು. ಆದರೆ ಈಗ ‘ಮೌಂಜಾರೋ’ (Mounjaro) ಮತ್ತು ‘ಓಜೆಂಪಿಕ್’ (Ozempic) ನಂತಹ ತೂಕ ಇಳಿಸುವ ಇಂಜೆಕ್ಷನ್ಗಳನ್ನು ಪಡೆಯುವ ಹೊಸ ಸಂಸ್ಕೃತಿ ಭಾರತದ ಶ್ರೀಮಂತ ವರ್ಗದಲ್ಲಿ ಕಾಣಿಸಿಕೊಳ್ಳುತ್ತಿದೆ. ಇವರನ್ನು ವಿದೇಶಿ ಮಾಧ್ಯಮಗಳು ‘ಮೌಂಜಾರೋ ಬ್ರೈಡ್ಸ್’ ಎಂದು ಕರೆಯುತ್ತಿವೆ.
ಮೂಲತಃ ಇದು ಟೈಪ್-2 ಮಧುಮೇಹ (Diabetes) ಚಿಕಿತ್ಸೆಗಾಗಿ ಬಳಸುವ ಔಷಧ. ಆದರೆ ಇದು ಹಸಿವನ್ನು ಕಡಿಮೆ ಮಾಡಿ ಅತಿ ವೇಗವಾಗಿ ತೂಕ ಇಳಿಸಲು ಸಹಾಯ ಮಾಡುವುದರಿಂದ, ಈಗ ಇದನ್ನು ಕಾಸ್ಮೆಟಿಕ್ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ.
ಶಾರ್ಟ್ಕಟ್ ಸೌಂದರ್ಯ: ಮದುವೆಗೆ ಕೇವಲ 2-3 ತಿಂಗಳು ಬಾಕಿ ಇರುವಾಗ ಜಿಮ್ಗೆ ಹೋಗಲು ಸಮಯವಿಲ್ಲದ ಯುವತಿಯರು, ಕೇವಲ ಒಂದೇ ತಿಂಗಳಲ್ಲಿ 5 ರಿಂದ 10 ಕೆಜಿ ತೂಕ ಇಳಿಸಿಕೊಳ್ಳಲು ಈ ಇಂಜೆಕ್ಷನ್ಗಳ ಮೊರೆ ಹೋಗುತ್ತಿದ್ದಾರೆ.
ಈ ಒಂದು ಇಂಜೆಕ್ಷನ್ ಕೋರ್ಸ್ ಪಡೆಯಲು ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಆದರೂ ಸೋಷಿಯಲ್ ಮೀಡಿಯಾ ಮತ್ತು ಫೋಟೋಶೂಟ್ ಕ್ರೇಜ್ನಿಂದಾಗಿ ಯುವತಿಯರು ಹಣದ ಬಗ್ಗೆ ಚಿಂತಿಸುತ್ತಿಲ್ಲ.
ತೂಕ ಇಳಿಸುವ ಈ ಇಂಜೆಕ್ಷನ್ಗಳು ವೈದ್ಯರ ಸಲಹೆಯಿಲ್ಲದೆ ಬಳಸಿದರೆ ಭೀಕರ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ:
ಜೀರ್ಣಕ್ರಿಯೆ ಸಮಸ್ಯೆ: ತೀವ್ರವಾದ ವಾಕರಿಕೆ, ವಾಂತಿ ಮತ್ತು ಮಲಬದ್ಧತೆ ಕಾಣಿಸಿಕೊಳ್ಳಬಹುದು.
ದಿಢೀರ್ ತೂಕ ಇಳಿಕೆಯಿಂದ ದೇಹದಲ್ಲಿ ಶಕ್ತಿ ಕುಂದಿ, ಮದುವೆಯ ಸಂಭ್ರಮದ ವೇಳೆಯೇ ಸುಸ್ತಾಗುವ ಸಾಧ್ಯತೆ ಇರುತ್ತದೆ. ಕೊಬ್ಬಿನ ಜೊತೆಗೆ ಸ್ನಾಯುಗಳು (Muscle loss) ಕೂಡ ಕರಗುವುದರಿಂದ ಮುಖದ ಕಳೆ ಗುಂದಬಹುದು.ಕಿಡ್ನಿ ಮತ್ತು ಪ್ಯಾಂಕ್ರಿಯಾಸ್ ಮೇಲೆ ಇದು ಕೆಟ್ಟ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.








