ಚೆನ್ನೈ : ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸಮುದ್ರದ ಮೇಲೆ ಭಾರತದ ಮೊದಲ ಗಾಜಿನ ಸೇತುವೆಯನ್ನು ಉದ್ಘಾಟಿಸಲಾಗಿದೆ.
ಈ ಗಾಜಿನ ಸೇತುವೆಯು 77 ಮೀಟರ್ ಉದ್ದ ಮತ್ತು 10 ಮೀಟರ್ ಅಗಲವನ್ನು ಹೊಂದಿದೆ, ಇದು ವಿವೇಕಾನಂದ ರಾಕ್ ಸ್ಮಾರಕ ಮತ್ತು ಕನ್ಯಾಕುಮಾರಿ ದಡದಲ್ಲಿರುವ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುತ್ತದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೋಮವಾರ ಸಂಜೆ ಸೇತುವೆಯನ್ನು ಉದ್ಘಾಟಿಸಿದರು.
ದೇಶದ ಮೊದಲ ಇಂತಹ ಸೇತುವೆ
ಕನ್ಯಾಕುಮಾರಿ ಕಡಲತೀರದಲ್ಲಿ ನಿರ್ಮಿಸಲಾಗಿರುವ ಈ ಗಾಜಿನ ಸೇತುವೆ ದೇಶದಲ್ಲೇ ಮೊದಲ ಸೇತುವೆ ಎಂದು ಹೇಳಲಾಗುತ್ತಿದೆ. ಈ ಸೇತುವೆಯು ಪ್ರವಾಸಿಗರಿಗೆ ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆ ಮತ್ತು ಸುತ್ತಮುತ್ತಲಿನ ಸಮುದ್ರದ ಅತ್ಯುತ್ತಮ ನೋಟವನ್ನು ನೀಡುತ್ತದೆ. ಈ ಸೇತುವೆಯ ಮೇಲೆ ನಡೆಯುವುದು ರೋಮಾಂಚನಕಾರಿ ಅನುಭವವಾಗಿದೆ.
ಈ ಗಾಜಿನ ಸೇತುವೆಯನ್ನು ತಮಿಳುನಾಡು ಸರ್ಕಾರ 37 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದೆ. ದಿವಂಗತ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿಹಬ್ಬದ ಅಂಗವಾಗಿ ಸಿಎಂ ಎಂಕೆ ಸ್ಟಾಲಿನ್ ಸೇತುವೆಯನ್ನು ಉದ್ಘಾಟಿಸಿದರು. ಉದ್ಘಾಟನೆಯ ನಂತರ ಮುಖ್ಯಮಂತ್ರಿ ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ರಾಜ್ಯ ಸಚಿವರು, ಸಂಸದೆ ಕನಿಮೊಳಿ ಹಾಗೂ ಹಿರಿಯ ಅಧಿಕಾರಿಗಳು ಸೇರಿ ಸೇತುವೆಯ ಮೇಲೆ ಸಂಚರಿಸಿ ಅನುಭವ ಪಡೆದರು.