ವಿಶಾಖಪಟ್ಟಣಂ:ಭಾರತದ ರಕ್ಷಣಾ ಬಲಕ್ಕೆ ಇಂದು ಮತ್ತೊಂದು ಆನೆಬಲ ಬಂದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶದ ಮೂರನೇ ಸ್ವದೇಶಿ ನಿರ್ಮಿತ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN) ‘ಐಎನ್ಎಸ್ ಅರಿದಮನ್’ ಅನ್ನು ನೌಕಾಸೇನೆಗೆ ಹಸ್ತಾಂತರಿಸಿದರು. ಇದರೊಂದಿಗೆ ಸಮುದ್ರದ ಅಡಿಯಿಂದಲೂ ಪರಮಾಣು ದಾಳಿ ನಡೆಸುವ ಭಾರತದ ‘ನ್ಯೂಕ್ಲಿಯರ್ ಟ್ರಯಾಡ್’ ಸಾಮರ್ಥ್ಯಕ್ಕೆ ಭಾರಿ ವೇಗ ಸಿಕ್ಕಂತಾಗಿದೆ.
ಸಂಸ್ಕೃತದಲ್ಲಿ ಅರಿದಮನ್ ಎಂದರೆ ಶತ್ರುಗಳನ್ನು ನಾಶಪಡಿಸುವವನು ಎಂದರ್ಥ. ಈ ಜಲಾಂತರ್ಗಾಮಿಯು ಅರಿಹಂತ್ ದರ್ಜೆಯ (Arihant-class) ಮೂರನೇ ಹಡಗಾಗಿದ್ದು, ಇದರ ಸೈಲೆಂಟ್ ಎಂಟ್ರಿ ಶತ್ರು ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದ ಎದೆಬಡಿತ ಹೆಚ್ಚಿಸಿದೆ.
ಇಂದೇ (ಏಪ್ರಿಲ್ 3) ಭಾರತೀಯ ನೌಕಾಸೇನೆಗೆ ಅತ್ಯಾಧುನಿಕ ಯುದ್ಧನೌಕೆ ‘ಐಎನ್ಎಸ್ ತಾರಾಗಿರಿ’ (INS Taragiri) ಕೂಡ ಸೇರ್ಪಡೆಯಾಗಿದ್ದು, ನೌಕಾಸೇನೆಗೆ ಇದು ಐತಿಹಾಸಿಕ ದಿನವಾಗಿದೆ.
ಸ್ವದೇಶಿ ನಿರ್ಮಾಣ: ಇದನ್ನು ವಿಶಾಖಪಟ್ಟಣಂನ ಶಿಪ್ ಬಿಲ್ಡಿಂಗ್ ಸೆಂಟರ್ನಲ್ಲಿ (SBC) ಅತ್ಯಂತ ರಹಸ್ಯವಾಗಿ ನಿರ್ಮಿಸಲಾಗಿದೆ. ಇದು ಸುಮಾರು ಶೇ. 70ಕ್ಕಿಂತ ಹೆಚ್ಚು ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದೆ.
ಇದು 3,500 ಕಿ.ಮೀ ದೂರದ ಗುರಿಯನ್ನು ಹೊಡೆಯಬಲ್ಲ K-4 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರ ವಿಶೇಷ ವಿನ್ಯಾಸದಿಂದಾಗಿ ಶತ್ರುಗಳ ರಾಡಾರ್ಗೆ ಸಿಗದೆ ಸಮುದ್ರದಾಳದಲ್ಲಿ ತಿಂಗಳುಗಟ್ಟಲೆ ಅಡಗಿರಬಲ್ಲದು.








