ಲಂಡನ್:ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ದಿಗ್ಬಂಧನಕ್ಕೊಳಗಾಗಿರುವುದು ಜಾಗತಿಕ ಆರ್ಥಿಕತೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಸಂಕಷ್ಟವನ್ನು ಬಗೆಹರಿಸಲು ಮತ್ತು ಸಮುದ್ರ ಮಾರ್ಗವನ್ನು ಮರುಪಡೆಯಲು ರಚನೆಯಾಗಿರುವ ಪ್ರಬಲ ರಾಷ್ಟ್ರಗಳ ಒಕ್ಕೂಟಕ್ಕೆ (Coalition of Nations) ಸೇರಲು ಭಾರತ ನಿರ್ಧರಿಸಿದೆ.
ಅಮೆರಿಕ, ಬ್ರಿಟನ್ ಮತ್ತು ಇತರ ಪ್ರಮುಖ ದೇಶಗಳನ್ನೊಳಗೊಂಡ ಈ ಒಕ್ಕೂಟವು ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ಪುನಃ ಆರಂಭಿಸಲು ರಾಜತಾಂತ್ರಿಕ ಮತ್ತು ತಾಂತ್ರಿಕ ಮಾರ್ಗಗಳನ್ನು ಹುಡುಕುತ್ತಿದೆ. ಈಗ ಭಾರತ ಈ ಗುಂಪನ್ನು ಸೇರಿರುವುದು ಒಕ್ಕೂಟಕ್ಕೆ ಹೆಚ್ಚಿನ ಬಲ ನೀಡಿದೆ.
ಭಾರತವು ತನ್ನ ಒಟ್ಟು ತೈಲ ಆಮದಿನ ಬಹುಪಾಲು ಈ ಮಾರ್ಗದ ಮೂಲಕವೇ ಪಡೆಯುತ್ತದೆ. ಹೀಗಾಗಿ, ಜಲಸಂಧಿ ಬಂದ್ ಆಗಿರುವುದು ದೇಶದ ಇಂಧನ ಭದ್ರತೆಗೆ ಧಕ್ಕೆಯಾಗುವ ಭೀತಿ ಇರುವುದರಿಂದ ಭಾರತ ಈ ನಿರ್ಧಾರ ಕೈಗೊಂಡಿದೆ.ಕೇವಲ ಮಿಲಿಟರಿ ಶಕ್ತಿಯ ಬದಲಾಗಿ, ಇರಾನ್ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ಸಂಧಾನಕಾರನಾಗಿ ಕೆಲಸ ಮಾಡುವ ಮೂಲಕ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡುವುದು ಭಾರತದ ಮುಖ್ಯ ಉದ್ದೇಶವಾಗಿದೆ.
ಈ ಭಾಗದಲ್ಲಿ ಈಗಾಗಲೇ ಭಾರತೀಯ ನೌಕಾಪಡೆಯು ಸಕ್ರಿಯವಾಗಿದ್ದು, ಅಂತರಾಷ್ಟ್ರೀಯ ಒಕ್ಕೂಟದೊಂದಿಗೆ ಸೇರಿ ವಾಣಿಜ್ಯ ಹಡಗುಗಳಿಗೆ ರಕ್ಷಣೆ ನೀಡುವ ಕಾರ್ಯವನ್ನು ಚುರುಕುಗೊಳಿಸಲಿದೆ.








