ನವದೆಹಲಿ: ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರತದ ಪ್ರಾಮುಖ್ಯತೆ ಮತ್ತೊಮ್ಮೆ ಸಾಬೀತಾಗಿದೆ. ಜೂನ್ 15 ರಿಂದ 17 ರವರೆಗೆ ಫ್ರಾನ್ಸ್ನ ಎವಿಯನ್-ಲೆ-ಬೈನ್ಸ್ (Évian-les-Bains) ನಲ್ಲಿ ನಡೆಯಲಿರುವ 52ನೇ ಜಿ7 (G7) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತ ಆಹ್ವಾನ ಲಭ್ಯವಾಗಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮೋದಿಯವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದಾರೆ.
ಇತ್ತೀಚೆಗೆ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಅಧ್ಯಕ್ಷ ಮ್ಯಾಕ್ರನ್ ಅವರು ಮೋದಿಯವರನ್ನು ಆಹ್ವಾನಿಸಿದ್ದು, ಜಾಗತಿಕ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಭಾರತದ ಪಾತ್ರ ನಿರ್ಣಾಯಕ ಎಂದು ಶ್ಲಾಘಿಸಿದ್ದಾರೆ.
ಜಾಗತಿಕ ಆರ್ಥಿಕತೆ, ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆ (AI) ಮತ್ತು ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳ ಕುರಿತು ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.
ಚೀನಾ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲವಾದರೂ, ಭಾರತ, ದಕ್ಷಿಣ ಕೊರಿಯಾ ಮತ್ತು ಬ್ರೆಜಿಲ್ನಂತಹ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳನ್ನು ಫ್ರಾನ್ಸ್ ಆಹ್ವಾನಿಸಿರುವುದು ಜಾಗತಿಕ ವೇದಿಕೆಯಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.








