ಅಫ್ಘಾನಿಸ್ತಾನದ ಗಡಿ ಭಾಗಗಳಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭೀಕರ ವೈಮಾನಿಕ ದಾಳಿಗಳ ವಿರುದ್ಧ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಗುಡುಗಿದೆ. ಪವಿತ್ರ ರಂಜಾನ್ ಮಾಸದಲ್ಲೇ ಅಮಾಯಕ ಜನರನ್ನು ಬಲಿಪಡೆಯುತ್ತಿರುವ ಪಾಕಿಸ್ತಾನದ ವರ್ತನೆಯನ್ನು ಭಾರತವು “ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆ” ಮತ್ತು “ಬೂಟಾಟಿಕೆ” ಎಂದು ಕಟುವಾಗಿ ಟೀಕಿಸಿದೆ.
ಭಾರತದ ವಾದದ ಮುಖ್ಯಾಂಶಗಳು:
ನೂರಾರು ಸಾವು-ನೋವು: ಪಾಕಿಸ್ತಾನದ ದಾಳಿಯಿಂದಾಗಿ ಈವರೆಗೆ ಅಫ್ಘಾನಿಸ್ತಾನದಲ್ಲಿ 185ಕ್ಕೂ ಹೆಚ್ಚು ಅಮಾಯಕ ನಾಗರಿಕರು ಮೃತಪಟ್ಟಿದ್ದಾರೆ. ಇದರಲ್ಲಿ ಶೇ. 55 ರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ ಎಂದು ಭಾರತದ ರಾಯಭಾರಿ ಪರ್ವತನೇನಿ ಹರೀಶ್ ಅಂಕಿಅಂಶ ಸಮೇತ ವಿವರಿಸಿದರು.
ಧರ್ಮ ಮತ್ತು ಬೂಟಾಟಿಕೆ: “ಒಂದೆಡೆ ಇಸ್ಲಾಮಿಕ್ ಒಗ್ಗಟ್ಟು ಮತ್ತು ಅಂತರಾಷ್ಟ್ರೀಯ ತತ್ವಗಳ ಬಗ್ಗೆ ಮಾತನಾಡುವ ಪಾಕಿಸ್ತಾನ, ಇನ್ನೊಂದೆಡೆ ಪವಿತ್ರ ರಂಜಾನ್ ತಿಂಗಳಲ್ಲೇ ಮುಸ್ಲಿಂ ಬಾಂಧವರ ಮೇಲೆ ಬಾಂಬ್ ದಾಳಿ ನಡೆಸುತ್ತಿರುವುದು ಅದರ ದ್ವಂದ್ವ ನೀತಿಯನ್ನು ತೋರಿಸುತ್ತದೆ” ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿತು.
ಸಾರ್ವಭೌಮತ್ವದ ಉಲ್ಲಂಘನೆ: ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ದಾಳಿ ಮಾಡುವ ಮೂಲಕ ಪಾಕಿಸ್ತಾನವು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ನೆರೆಯ ರಾಷ್ಟ್ರದ ಸಾರ್ವಭೌಮತ್ವವನ್ನು ಹತ್ತಿಕ್ಕುತ್ತಿದೆ ಎಂದು ಭಾರತ ಪ್ರತಿಪಾದಿಸಿತು.
ವ್ಯಾಪಾರದಲ್ಲಿ ಅಡ್ಡಿ: ಅಫ್ಘಾನಿಸ್ತಾನವು ಒಂದು ಭೂಬಂಧಿತ (Landlocked) ರಾಷ್ಟ್ರವಾಗಿದ್ದು, ಅದರ ವ್ಯಾಪಾರ ಮತ್ತು ಸಾರಿಗೆ ಮಾರ್ಗಗಳನ್ನು ಪಾಕಿಸ್ತಾನವು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಭಾರತ ದೂರಿದೆ.







