ನವದೆಹಲಿ: ಭಾರತದಲ್ಲಿ ಇನ್ಮುಂದೆ 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ಗಳನ್ನು (Cough Syrups) ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳು ಹಾಗೂ ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಈಗಾಗಲೇ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದ್ದು, 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಔಷಧಿಗಳನ್ನು ವೈದ್ಯರು ಶಿಫಾರಸು ಮಾಡಬಾರದು ಅಥವಾ ಔಷಧಾಲಯಗಳಲ್ಲಿ ನೀಡಬಾರದು ಎಂದು ಸೂಚಿಸಿದೆ.
ಕೇವಲ 2 ವರ್ಷವಲ್ಲದೆ, 5 ವರ್ಷದೊಳಗಿನ ಮಕ್ಕಳಿಗೂ ಇಂತಹ ಸಿರಪ್ಗಳನ್ನು ನೀಡುವುದು ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ನೀಡಲೇಬೇಕಾದ ಅನಿವಾರ್ಯತೆ ಇದ್ದರೆ, ಕಟ್ಟುನಿಟ್ಟಾದ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ನೀಡಬೇಕು ಎಂದು ತಿಳಿಸಲಾಗಿದೆ.
ಕಾರಣವೇನು?: ಮಕ್ಕಳಲ್ಲಿ ಕಂಡುಬರುವ ಕೆಮ್ಮು ಸಾಮಾನ್ಯವಾಗಿ ತನ್ನಷ್ಟಕ್ಕೆ ತಾನೇ ವಾಸಿಯಾಗುತ್ತದೆ. ಆದರೆ, ಸಿರಪ್ಗಳಲ್ಲಿರುವ ರಾಸಾಯನಿಕಗಳು (ವಿಶೇಷವಾಗಿ ದ್ವಿತೀಯ ದರ್ಜೆಯ ಔಷಧಿಗಳು ಅಥವಾ ಕಲುಷಿತ ಅಂಶಗಳು) ಮಕ್ಕಳ ಕಿಡ್ನಿ ಮತ್ತು ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುವ ಅಪಾಯವಿರುತ್ತದೆ.








