ನವದೆಹಲಿ: ಗಲ್ಫ್ ರಾಷ್ಟ್ರಗಳಲ್ಲಿನ ಯುದ್ಧದ ಪರಿಸ್ಥಿತಿ ಮತ್ತಷ್ಟು ಭೀಕರ ಸ್ವರೂಪ ಪಡೆದಿದ್ದು, ಕುವೈತ್‌ನ ವಿದ್ಯುತ್ ಮತ್ತು ನೀರು ಶುದ್ಧೀಕರಣ ಘಟಕದ (Desalination Plant) ಮೇಲೆ ನಡೆದ ಇರಾನ್ ದಾಳಿಯಲ್ಲಿ ಭಾರತೀಯ ಮೂಲದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆಗೆ ಭಾರತೀಯ ರಾಯಭಾರ ಕಚೇರಿಯು ತೀವ್ರ ದುಃಖ ವ್ಯಕ್ತಪಡಿಸಿದೆ.
ಭಾನುವಾರ ತಡರಾತ್ರಿ ಕುವೈತ್‌ನ ಪ್ರಮುಖ ಸೇವಾ ಕಟ್ಟಡವೊಂದನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ಕುವೈತ್‌ನ ವಿದ್ಯುತ್ ಮತ್ತು ನೀರು ಸಚಿವಾಲಯ ದೃಢಪಡಿಸಿದೆ.
“ಕುವೈತ್‌ನಲ್ಲಿ ನಡೆದ ದಾಳಿಯಲ್ಲಿ ನಮ್ಮ ದೇಶದ ನಾಗರಿಕ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ. ಅವರ ಕುಟುಂಬಕ್ಕೆ ನಮ್ಮ ಆಳವಾದ ಸಂತಾಪಗಳು. ಮೃತರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲು ನಾವು ಕುವೈತ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕಳೆದ ಕೆಲವೇ ದಿನಗಳಲ್ಲಿ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯಿಂದಾಗಿ ಮೃತಪಟ್ಟ ಭಾರತೀಯರ ಸಂಖ್ಯೆ ಈಗ ಎಂಟಕ್ಕೆ (8) ಏರಿಕೆಯಾಗಿದೆ. ಕಳೆದ ವಾರವಷ್ಟೇ ಯುಎಇ (UAE) ಮೇಲೆ ನಡೆದ ಕ್ಷಿಪಣಿ ದಾಳಿಯ ಅವಶೇಷಗಳು ಬಿದ್ದು ಮತ್ತೊಬ್ಬ ಭಾರತೀಯ ಮೃತಪಟ್ಟಿದ್ದರು.







