ಯಾದಗಿರಿ: ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಬಂಧನದ ಭೀತಿಯಲ್ಲಿದ್ದ ಮುತ್ಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:
ಕೆಲ ದಿನಗಳ ಹಿಂದೆ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಅತ್ಯಂತ ಅಸಭ್ಯವಾಗಿ ಮತ್ತು ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಮಠದ ಹೆಸರಿನಲ್ಲಿ ಇಂತಹ ನೀಚ ಕೃತ್ಯವೆಸಗಿದ ಮುತ್ಯಾನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿಡಿಯೋ ಆಧರಿಸಿ ಪೊಲೀಸರು ಮುತ್ಯಾನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಕೋರ್ಟ್ ಆದೇಶ:
ಪೊಲೀಸರು ಬೆನ್ನುಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಮುತ್ಯಾ, ಬಂಧನದಿಂದ ತಪ್ಪಿಸಿಕೊಳ್ಳಲು ಯಾದಗಿರಿಯ ಜಿಲ್ಲಾ ಪ್ರಧಾನ ಮತ್ತು ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದನು. ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮರುಳುಸಿದ್ದರಾಧ್ಯ ಅವರು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ನೀಡಲು ನಿರಾಕರಿಸಿದ್ದಾರೆ.
ಬಿಗಿಯಾದ ಕಾನೂನು ಕುಣಿಕೆ:
ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಮಲ್ಲಿಕಾರ್ಜುನ ಮುತ್ಯಾಗೆ ಈಗ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾದಂತಾಗಿದೆ. ಯಾವುದೇ ಕ್ಷಣದಲ್ಲಿ ಪೊಲೀಸರು ಆತನನ್ನು ಬಂಧಿಸುವ ಸಾಧ್ಯತೆಯಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.








