ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಕ್ಟೋಬರ್ 3ಕ್ಕೆ ದಸರಾ ಉದ್ಘಾಟನೆಯಾಗಲಿದೆ. ಬೆಳಿಗ್ಗೆ 9.15ರಿಂದ 9.40 ರೊಳಗಿನ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದೆ.
ಅಕ್ಟೋಬರ್ 3ರಂದು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಆಗುತ್ತದೆ. ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಸಿಎಂ ನೀಡಲಿದ್ದಾರೆ. 11 ವೇದಿಕೆಗಳಲ್ಲಿ 508 ಕಲಾ ತಂಡಗಳ ಕಲಾವಿದರು ಟೌನ್ ಹಾಲ್ ನಲ್ಲಿ ನಾಟಕ ಪ್ರದರ್ಶನ ನೀಡಲಿದ್ದಾರೆ. ಅಕ್ಟೋಬರ್ 5ರಂದು ಪ್ರಭುತ್ವ ಮತ್ತು ಸಂವಿಧಾನ ಆಶಯದಲ್ಲಿ ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಅಕ್ಟೋಬರ್ 3 ರಿಂದ 11ರವರೆಗೂ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದೆ. ಅಕ್ಟೋಬರ್ 12ರ ಶನಿವಾರ ಜಂಬೂ ಸವಾರಿ ನಡೆಯಲಿದೆ. ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿಗೆ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ.
ವಿಶ್ವವಿಖ್ಯಾತ ಮೈಸೂರು ದಸರಾ- ಸಿಎಂ ಸಿದ್ದರಾಮ್ಯಯ ಶುಭಸಂದೇಶ
ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು : ಈ ವರ್ಷದ ಅಕ್ಟೋಬರ್ 3ರಿಂದ 12ರ ವರೆಗೆ ಆಚರಿಸಲಾಗುವ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ನಿಮ್ಮೆಲ್ಲರನ್ನು ಪ್ರೀತಿಯಿಂದ ಸ್ವಾಗತಿಸಲು ಹರ್ಷಿಸುತ್ತೇನೆ.
ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜಿಂಜಿಸುವ ದಸರಾ ಹಬ್ಬ ದುಷ್ಟಶಕ್ತಿಗಳ ವಿರುದ್ಧ ಸಾಧಿಸಿದ ವಿಜಯದ ಸಂಕೇತವೂ ಹೌದು. ಸಾಂಪ್ರದಾಯಿಕವಾದ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ನಮ್ಮ ಸಾಹಿತ್ಯ, ಕಲೆ, ಸಂಗೀತ, ಕ್ರೀಡಾ ಕ್ಷೇತ್ರಗಳಲ್ಲಿನ ಸಾಧನೆಯ ವಿಜಯೋತ್ಸವವಾಗಿಯೂ ನಾವು ನಾಡಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಕಳೆದ ಬಾರಿ ಅನಿವಾರ್ಯವಾಗಿ ದಸರಾ ಹಬ್ಬವನ್ನು ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸರಳವಾಗಿ ಆಚರಿಸಿದ್ದೆವು. ಈ ಬಾರಿ ನಾಡಿನ ಅಧಿದೇವತೆಯಾದ ಚಾಮುಂಡೇಶ್ವರಿ ಆಶೀರ್ವಾದದಿಂದಾಗಿ ಪ್ರಕೃತಿ ನಮ್ಮೆಲ್ಲರನ್ನು ಒಂದು ಹರಸಿದೆ. ಇಳೆ ತುಂಬಾ ಮಳೆಯಾಗಿ ಆಣೆಕಟ್ಟುಗಳೆಲ್ಲ ತುಂಬಿ ನಾಡಿನಾದ್ಯಂತ ಹರ್ಷದ ಹೊನಲು ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಈ ಬಾರಿ ಸಕಲ ಸಂಪ್ರದಾಯಗಳನ್ನು ಮೇಲೈಸಿಕೊಂಡು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಬ್ಬದ ಸಂಭ್ರಮಾಚರಣೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಹಬ್ಬದ ವೈಭವವನ್ನು ಕಣ್ಮುಂಚಿಕೊಳ್ಳಲು ನಿಮ್ಮೆಲ್ಲರನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ.
ವಿಶ್ವವಿಖ್ಯಾತ ಮೈಸೂರು ದಸರಾ -ಡಿಸಿಎಂ ಡಿ.ಕೆ.ಶಿವಕುಮರ್ ಶುಭಸಂದೇಶ
ನಾಡಿನ ಸಮಸ್ತ ಜನರಿಗೆ ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ನಾಡಹಬ್ಬ ದಸರಾ 2024 ರ ಶುಭಾಶಯಗಳು.
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಎಂದಿನಂತೆ ಈ ವರ್ಷವೂ ದಸರಾ ಹಬ್ಬವನ್ನು ಸಾಂಪ್ರದಾಯಿಕವಾಗಿ, ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ತಾಯಿಯ ಕೃಪಾಶೀರ್ವಾದ ಸಮಸ್ತ ಜನರ ಮೇಲಿರಲಿ, ಮಳೆ-ಬೆಳೆ ಚೆನ್ನಾಗಿ ಆಗಲಿ, ಸಕಲರಿಗೂ ಸಮೃದ್ಧಿ ತರಲಿ ಎಂದು ಪ್ರಾರ್ಥಿಸುತ್ತೇನೆ. ತಾವೆಲ್ಲರೂ ಈ ವರ್ಷದ ದಸರಾ ವೈಭವದಲ್ಲಿ ಪಾಲ್ಗೊಳ್ಳಲು ಈ ಮೂಲಕ ಆಮಂತ್ರಿಸುತ್ತಿದ್ದೇನೆ. ತಮ್ಮೆಲ್ಲರಿಗೂ ಮತ್ತೊಮ್ಮೆ ದಸರಾ ಹಬ್ಬದ ಶುಭಾಶಯಗಳು.