ಶಿವಮೊಗ್ಗ: ಇಂದು ಸಾಗರ ತಾಲ್ಲೂಕಿನ ಕೊಗಾರಿನಲ್ಲಿ ಶರಾವತಿ ವನ್ಯಜೀವಿ ವಲಯದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಿಸಲಾಯಿತು. ಮಾನವ-ಪ್ರಾಣಿ ಸಂಘರ್ಷದಲ್ಲಿ ಹುತಾತ್ಮರಾದಂತ ನೌಕರರಿಗೆ ಕೊಗಾರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕಾತೇದಾರ್ ಅವರು ಗೌರವ ನಮನ ಸಲ್ಲಿಸಿದರು.
ಈ ಬಳಿಕ ನೌಕರರನ್ನು ಉದ್ದೇಶಿಸಿ ಮಾತನಾಡಿದಂತ ಅವರು, ಸೆ.11ರಂದು ರಾಷ್ಟ್ರೀಯ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ದೇಶ, ರಾಜ್ಯದಲ್ಲಿ ಅರಣ್ಯ ಇಲಾಖೆಯ ನೌಕರರು ಮಾನವ-ಪ್ರಾಣಿ ಸಂಘರ್ಷದಲ್ಲಿ ಹಲವಾರು ಹುತಾತ್ಮರಾಗಿದ್ದಾರೆ. ಕಾಡಿನಿಂದ ನಾಡಿಗೆ ಬರುವಂತ ಪ್ರಾಣಿಗಳ ನಿಯಂತ್ರಣ, ಕಾಡ್ಗಿಚ್ಚಿನ ಸಂದರ್ಭದಲ್ಲಿ ಹಲವು ಅರಣ್ಯ ಇಲಾಖೆಯ ನೌಕರರು ಹುತಾತ್ಮರಾಗಿದ್ದಾರೆ. ಅವರನ್ನು ನಾವು ಸ್ಮರಿಸೋಣ. ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದರು.
ರಾಜ್ಯದಲ್ಲಿ ಕಾಡಿಗೆ ಅಮೂಲ್ಯ ಸ್ಥಾನವನ್ನು ನೀಡಲಾಗಿದೆ. ಆಲದ ಮರಕ್ಕೆ ದೇವರ ಸ್ಥಾನ ನೀಡಲಾಗಿದೆ. ದೇವರ ವನವಿದೆ. ಸಮುದಾಯ ಅರಣ್ಯವಿದೆ. ದೇವರ ಹೆಸರಿನಲ್ಲಿ ಕಾಡನ್ನು ಕಾಡುವಂತದ್ದನ್ನು ನಾವು ರೂಡಿಸಿಕೊಂಡು ಬಂದಿದ್ದೇವೆ. ಈ ಸಂಸ್ಕೃತಿ ಮುಂದುವರೆಯಲಿ. ಅಲ್ಲದೇ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಹಿಂದಿನ ಕತೆಯನ್ನು ನೌಕರರಿಗೆ ವಿವರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಕೊಗಾರು ಉಪ ವಲಯ ಅರಣ್ಯಾಧಿಕಾರಿಗಳಾದಂತ ಮಂಜುನಾಥ್, ಇಬ್ರಾಹಿಂ, ಕಿರಣ್, ಗಸ್ತು ಅರಣ್ಯ ಪಾಲಕರಾದಂತ ಶಿವರಾಜ್, ಕಚೇರಿ ಸಿಬ್ಬಂದಿಗಳಾದಂತ ರಾಘವೇಂದ್ರ, ಮಂಜಪ್ಪ, ರಾಜೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು