ಶಿವಮೊಗ್ಗ: ಜಿಲ್ಲೆಯ ಸಾಗರ ನಗರಸಭೆ ಅನುದಾನದಿಂದ ದೆಹಲಿ ಮತ್ತು ಹರಿಯಾಣ ರಾಜ್ಯಗಳ ಮಹಾನಗರ ಪಾಲಿಕೆ ವೀಕ್ಷಣೆಗೆ ಹಮ್ಮಿಕೊಳ್ಳಲಾಗಿದ್ದ ಆರು ದಿನಗಳ ಅಧ್ಯಯನ ಪ್ರವಾಸಕ್ಕೆ ಬಿಜೆಪಿಯ 16 ಸದಸ್ಯರು ಪಾಲ್ಗೊಳ್ಳುತ್ತಿಲ್ಲ ಎಂದು ನಗರಸಭೆ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ ಪ್ರಸಾದ್ ತಿಳಿಸಿದ್ದಾರೆ. ಈ ಮೂಲಕ ಸಾಗರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಯನ ಪ್ರವಾಸಕ್ಕೆ ಅಪಸ್ವರ ಎದ್ದ ಬಳಿಕ ಆಡಳಿತ ಪಕ್ಷದ ಸದಸ್ಯರು ಒಲ್ಲೆ ಎನ್ನುವಂತಾಗಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆಯ ಸಾಮಾನ್ಯಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಪ್ರವಾಸ ಹೋಗುವುದು ಒಳ್ಳೆಯದು. ಆದರೆ ಉಳಿದಿರುವ ಎರಡು ತಿಂಗಳ ಅವಧಿಯಲ್ಲಿ ಸುಮಾರು 40 ಲಕ್ಷ ರೂ. ವೆಚ್ಚ ಮಾಡಿ ಸಾರ್ವಜನಿಕರ ಹಣದಲ್ಲಿ ಪ್ರವಾಸ ಹೋಗಲು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜೊತೆಗೆ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ ಎಂದರು.
ಆಧುನಿಕ ದಿನಮಾನದಲ್ಲಿ ನಾವಿದ್ದು ಕೃತಕ ಬುದ್ದಿಮತ್ತೆ ಮೂಲಕ ಅಲ್ಲಿನ ವಾತಾವರಣ ತಿಳಿದು, ಅದನ್ನು ಕಲಿತು ನಮ್ಮ ನಗರಸಭೆ ವ್ಯಾಪ್ತಿಯಲ್ಲಿ ಅಳವಡಸಿಕೊಳ್ಳಲು ಎಲ್ಲ ಅವಕಾಶ ಇದೆ. ಅದಕ್ಕಾಗಿ 40ರಿಂದ 50 ಲಕ್ಷ ರೂ. ಖರ್ಚು ಮಾಡುವ ಅಗತ್ಯವಿಲ್ಲ. ಜನರ ತೆರಿಗೆ ಹಣ ಅಪವ್ಯಯಗೊಳಿಸಲು ನಮಗೆ ಇಷ್ಟವಿಲ್ಲ. ಆದ್ದರಿಂದ ಬಿಜೆಪಿ ಸದಸ್ಯರು ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೇಸ್ ಬೆಂಬಲಿತ ಬಿಜೆಪಿ ಸದಸ್ಯ ಶಂಕರ ಅಳ್ವಿಕೋಡಿ ಮಾತನಾಡಿ, ಅಧ್ಯಯನ ಪ್ರವಾಸ ಅಗತ್ಯವಾಗಿದೆ. ಇದು ದುಂದುವೆಚ್ಚ ಹೇಗೆ ಆಗುತ್ತದೆ. ಇಂದಿನ ಕೆಲವು ದಿನಪತ್ರಿಕೆಗಳಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಫಿ ತಿಂಡಿಗೆ 200 ಕೋಟಿ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಅದು ದುಂದುವೆಚ್ಚವಲ್ಲವೇ ಎಂದು ಪ್ರಶ್ನಿಸಿದ ಅವರು ಜನರ ತೆರಿಗೆ ಹಣ ಖರ್ಚಾಗುತ್ತದೆ ಎಂದರೆ ಸಾಮಾನ್ಯಸಭೆಯಲ್ಲಿ ಕಾಫಿತಿಂಡಿಯನ್ನು ತರಿಸಬೇಡಿ ಎಂದು ತಾಕೀತು ಮಾಡಿದರು.
ವಿಪಕ್ಷ ಸದಸ್ಯ ಗಣಪತಿ ಮಂಡಗಳಲೆ ಮಾತನಾಡಿ, ಶಾಸಕರು ಅಧ್ಯಯನ ಪ್ರವಾಸಕ್ಕೆ ಹೋಗಲು ಒಪ್ಪಿಗೆ ನೀಡಿ ಅಗತ್ಯ ಸಿದ್ದತೆಗೆ ತಮ್ಮ ಪತ್ರವನ್ನು ಸಹ ನೀಡಿದ್ದಾರೆ. ಆಸಕ್ತಿ ಇದ್ದವರು ಪ್ರವಾಸಕ್ಕೆ ಹೋಗಿ ಬರುವುದರಲ್ಲಿ ತಪ್ಪಿಲ್ಲ. ಇನ್ನು ಎರಡು ಎರಡು ತಿಂಗಳಿನಲ್ಲಿ ಈ ಆಡಳಿತ ಮಂಡಳಿ ಅಧಿಕಾರ ಮುಗಿಯುತ್ತದೆ. ಇವರ ಪೈಕಿ ಹೆಚ್ಚಿನವರ ಗೆದ್ದು ಬಂದು ಕಲಿತಿದ್ದನ್ನು ಇಲ್ಲಿ ಅಳವಡಿಸಿಕೊಳ್ಳಲು ಅವಕಾಶ ಇರುತ್ತದೆ. ವೈಯಕ್ತಿಕವಾಗಿ ನಾನು ಪ್ರವಾಸಕ್ಕೆ ಹೋಗದೆ ಇದ್ದರು, ಹೋಗುವವರಿಗೆ ನನ್ನ ಬೆಂಬಲ ಇದೆ ಎಂದರು.
ನಾಮ ನಿರ್ದೇಶನ ಸದಸ್ಯ ರವಿಕುಮಾರ್ ಮಾತನಾಡಿ, ನಾವು ಮೋಜುಮಸ್ತಿಗೆ ಪ್ರವಾಸ ಹೋಗುತ್ತಿಲ್ಲ. ಒಮ್ಮತದಿಂದ ತೀರ್ಮಾನಿಸಿಯೆ ಶಾಸಕರ ಗಮನಕ್ಕೆ ತಂದು ಪ್ರವಾಸಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆಸಕ್ತಿ ಇದ್ದವರು ಹೋಗಲು ಹಣ ಬಿಡುಗಡೆ ಮಾಡಿ ಎಂದರೇ, ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಇಂತಹ ಸಂದರ್ಭದಲ್ಲಿ ಪ್ರವಾಸ ಬೇಕೆ ಎನ್ನುವುದು ಸಾರ್ವಜನಿಕ ಪ್ರಶ್ನೆಯಾಗಿದೆ. ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು ನಮ್ಮ ಆದ್ಯ ಕರ್ತವ್ಯ. ಈಗಾಗಲೆ ನಮ್ಮ ಪಕ್ಷದ 16 ಸದಸ್ಯರು ಹೋಗುವುದಿಲ್ಲ ಎಂದು ತಿಳಿಸಿದ್ದೇವೆ. ಊರಿನ ಸ್ಥಿತಿಗತಿ ಗಮನಿಸಿ ಮುಂದಿನ ನಡೆ ಇರಲಿ ಎಂದು ಸಲಹೆ ನೀಡಿದರು.
ನಗರಸಭೆ ಕಾಂಗ್ರೇಸ್ ಸದಸ್ಯ ತಸ್ರೀಫ್ ಮಾತನಾಡಿ, ನಾನು ಪ್ರವಾಸಕ್ಕೆ ಹೋಗುತ್ತಿಲ್ಲ. ಆದರೆ ಹೋಗುವವರಿಗೆ ಬೇಡ ಎಂದು ಹೇಳುವುದಿಲ್ಲ. ಯಾವ ರೀತಿ ಅಧ್ಯಯನ ಮಾಡುತ್ತೀರಿ. ಅಧ್ಯಯನ ಮಾಡಿದ್ದನ್ನು ನಮ್ಮೂರಿನ ಅಭಿವೃದ್ದಿಗೆ ಬಳಕೆ ಮಾಡಿಕೊಂಡರೆ ಒಳ್ಳೆಯದು ಎಂದರು.
ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪೌರಾಯುಕ್ತ ಎಚ್.ಕೆ.ನಾಗಪ್ಪ ಹಾಜರಿದ್ದರು.
ಸಾಗರದ ಆಸ್ಪತ್ರೆಯ ಜನರೇಟ್ ಕದ್ದವರ ವಿರುದ್ಧ ಸೂಕ್ತ ಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ
GOOD NEWS: ಬಿಬಿಎಂಪಿ ವ್ಯಾಪ್ತಿಯಲ್ಲಿ ಆನ್ ಲೈನ್, ಫೇಸ್ ಲೆಸ್ ‘ಇ-ಖಾತಾ ವ್ಯವಸ್ಥೆ’ ಜಾರಿ