ಬೆಂಗಳೂರು: ಇದು ಕೃತಕ ಬುದ್ಧಿಮತ್ತೆ (ಎ.ಐ.)ಕಾಲವಾಗಿದ್ದು, ಮಾಧ್ಯಮಗಳು ಸುದ್ದಿ ಪ್ರಸಾರಕ್ಕೆ ಮುನ್ನ ಸುದ್ದಿ ಚಿತ್ರಗಳ ನೈಜತೆಯನ್ನು ಖಚಿತ ಪಡಿಸಿಕೊಳ್ಳುವುದು ಅಗತ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧೀಭವನದಲ್ಲಿಂದು ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳು, ನಕಲಿ ಚಿತ್ರ, ದೃಶ್ಯಗಳ ಬಗ್ಗೆ ಎಚ್ಚರಿಕೆ ಅಗತ್ಯ. ಒಮ್ಮೆ ಚಾರಿತ್ರ್ಯವಧೆ ಆದರೆ ಮತ್ತೆ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಾಧ್ಯಮಗಳಿಗೆ ವಿಶ್ವಾಸಾರ್ಹತೆ ಮುಖ್ಯ. ಹೀಗಾಗಿ ಪೂರ್ವಾಗ್ರಹ ಪೀಡಿತವಾಗಿ ಮತ್ತು ರೋಚಕ ಸುದ್ದಿಗಳನ್ನು ಬಿತ್ತಸಿರುವ ಧಾವಂತದಲ್ಲಿ ಸುಳ್ಳೇ ಸತ್ಯ ಎಂಬಂತೆ ಬಿಂಬಿಸಬಾರದು, ಇದು ಜನರ ನಂಬಿಕೆಯನ್ನು ದೂರ ಮಾಡುತ್ತದೆ ಎಂದರು.
ಮಾಧ್ಯಗಳಿಗೆ ಸ್ವಾತಂತ್ರ್ಯ ಇರಬೇಕು. ನಿಯಂತ್ರಣ ಹಾಕಲು ಹಲವು ಕಾಯಿದೆಗಳಿವೆ. ಆದರೆ, ಮಾಧ್ಯಮಗಳು ಸ್ವಯಂ ನಿಯಂತ್ರಣ ವಿಧಿಸಿಕೊಂಡು ಸತ್ಯ, ನಿಖರ ಮಾಹಿತಿಯನ್ನು ಜನರಿಗೆ ನೀಡಬೇಕು. ಮಾಹಿತಿದಾಹವನ್ನು ತಣಿಸಬೇಕು ಎಂದು ಹೇಳಿದರು.
ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮರಂಗ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಲ್ಲಿ ಮತ್ತು ಸಮಾಜದ ಓರೆಕೋರೆ, ಸಾಮಾಜಿಕ ಪಿಡುಗುಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸಿದ್ದವು. ಸ್ವಾತಂತ್ರ್ಯೋತ್ತರದಲ್ಲೂ ಪತ್ರಿಕೆಗಳು, ಮಾಧ್ಯಮಗಳು ದೊಡ್ಡ ಪಾತ್ರ ನಿರ್ವಹಿಸುತ್ತಿವೆ. ಮಾಧ್ಯಮಗಳಿಗೆ, ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಶಕ್ತಿ ಇದ್ದು, ಅತ್ಯಂತ ಪ್ರಭಾವಶಾಲೀ ಸಾಧನವಾಗಿದೆ. ಇದರ ಸದ್ಬಳಕೆ ಆಗಬೇಕು ಎಂದರು.
ಪ್ರಕೃತಿ ಪರಿಸರದ ಕಾಳಜಿ ಮುಖ್ಯ:
ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪ್ರತೀಕೂಲ ಪರಿಸ್ಥಿತಿಯನ್ನು ಇಡೀ ಜಗತ್ತು ಎದುರಿಸುತ್ತಿದೆ. ವೃಕ್ಷಗಳ ಮಹತ್ವ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಕೃತಿ, ಪರಿಸರ, ವೃಕ್ಷ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಪತ್ರಕರ್ತರಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಇದೆ, ಎಲ್ಲಿಯೇ ಅರಣ್ಯ ಒತ್ತುವರಿಯಾದರೆ, ಅಕ್ರಮ ಮರ ಕಡಿತಲೆಯಾದರೆ ಮಾಹಿತಿ ನೀಡುತ್ತಾರೆ ಎಂದು ಹೇಳಿದರು.
ಕಗ್ಗದ ಕವಿ ಜಗ ಮೆಚ್ಚಿದ ಕವಿ ಡಿ.ವಿ. ಗುಂಡಪ್ಪನವರು ಪ್ರಥಮ ಅಧ್ಯಕ್ಷರಾಗಿದ್ದ ಸಂಘ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಂಗ ಸಂಸ್ಥೆಯಾಗಿ 9 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಈ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕಗಳಿಗೆ ಸುಸೂತ್ರವಾಗಿ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಿರುವುದು ಅಭಿನಂದನಾರ್ಹ ಎಂದರು.
ಕೇಂದ್ರದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ಎಂ.ಎಸ್.ಗುರುಪಾದಸ್ವಾಮಿ, ಖಾದ್ರಿ ಶಾಮಣ್ಣ, ಜಯಶೀಲರಾವ್, ಪೊತೇನ್ ಜೋಸೆಫ್ ಮೊದಲಾದವರು ಅಧ್ಯಕ್ಷರಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಶಿವಾನಂದ ತಗಡೂರು ಅವರ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ಪ್ರಶಂಸಿಸಿದರು.
1955ರಲ್ಲೇ ಪತ್ರಕರ್ತರಿಗೆ ಸೂಕ್ತ ವೇತನ, ಭತ್ಯೆ ಸಿಗಬೇಕು ಎಂಬುದನ್ನು ಮನಗಂಡ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕಾರ್ಯನಿರತ ಪತ್ರಕರ್ತರು ಮತ್ತು ಇತರ ಸುದ್ದಿ ಪತ್ರಿಕೆಗಳ ನೌಕರರ ಕಾಯಿದೆ 1955 ನ್ನು ಜಾರಿಗೆ ತಂದರು. ಮಾಧ್ಯಮಗಳು ಖಾಸಗಿ ವಲಯವೇ ಆಗಿದ್ದರೂ ವೇತನ ಆಯೋಗ ರಚಿಸಿ ಪತ್ರಕರ್ತರ ನೆರವಿಗೆ ನಿಂತರು ಎಂದು ಸ್ಮರಿಸಿದರು.
ಪತ್ರಕರ್ತರಿಗೆ ಅವರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘಟನೆಗಳ ಅಗತ್ಯವಿದೆ. ಕೆ.ಯು.ಡಬ್ಲ್ಯು.ಜೆ. ಸುದ್ದಿಗಾರರ ಮತ್ತು ಮಾಧ್ಯಮ ಸಂಸ್ಥೆಗಳ ಸಿಬ್ಬಂದಿಯ ಹಿತ ಕಾಯಲಿ, ಪತ್ರಕರ್ತರು ವೃತ್ತಿ ಘನತೆ ಕಾಪಾಡಿ, ಮಾಧ್ಯಮದ ಹಿರಿಮೆ ಎತ್ತಿ ಹಿಡಿಯಿರಿ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಐ.ಎಫ್.ಡಬ್ಲ್ಯುಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಹಿರಿಯ ಪತ್ರಕರ್ತೆ ನಾಗಮಣಿ ಎಸ್.ರಾವ್ ಮತ್ತಿತರರು ಪಾಲ್ಗೊಂಡಿದ್ದರು.
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?
ನ.26ರಂದು ಬೆಂಗಳೂರಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 4ರಿಂದ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ | Power Cut








