ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅರ್ಧನಾರೇಶ್ವರರನ್ನು ಮಾಡಿ ಎಂದು ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಇದು ಇಡೀ ದೇಶದ ನಾರಿಯರಿಗೆ ಮಾಡಿರುವಂತಹ ಅಪಮಾನ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದವರು. ಸಿಡಬ್ಲ್ಯುಸಿ ಸದಸ್ಯರೂ ಆಗಿದ್ದರು. ಇವರ ಸಣ್ಣತನದಿಂದಲೇ ಅವರಿಗೆ ಈಗ ಹಿನ್ನಡೆ (ಡಿಮೋಷನ್) ನೀಡಿ ಕಳುಹಿಸಿದ್ದಾರೆ ಎಂದು ಟೀಕಿಸಿದರು.
ರಾಷ್ಟ್ರಮಟ್ಟದಲ್ಲಿ ಹರಿಪ್ರಸಾದ್ ಅವರು ಪ್ರಧಾನಮಂತ್ರಿಗಳ ಆಯ್ಕೆ, ಸಂಸದರ ಆಯ್ಕೆ ರಾಜ್ಯಸಭಾ ಸದಸ್ಯರ ಆಯ್ಕೆ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಇಂದು ಅವರನ್ನು ಕಾಂಗ್ರೆಸ್ಸಿನ ಶೆಡ್ಡಿನಲ್ಲಿ ಇಟ್ಟಿದ್ದು, ಕೇವಲ ಒಬ್ಬ ವಿಧಾನ ಪರಿಷತ್ ಸದಸ್ಯರಾಗಿ ಕೂರಿಸಿದ್ದಾರೆ. ಅವರನ್ನು ಮಂತ್ರಿ ಮಾಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಅವರ ಸ್ಥಿತಿ ಹೇಗೆ ಇದೆ ಎಂದು ಯೋಚಿಸಿ ಎಂದರು.
ಸೋನಿಯಾ ಗಾಂಧಿಯವರಿಗೂ ಅವಮಾನ
ಇವರು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಗುಲಾಮರಾಗಿ ಕೆಲಸ ನಿರ್ವಹಿಸಿದ್ದವರು. ಈ ಗುಲಾಮಗಿರಿಯಲ್ಲಿ ಕೆಲಸ ಮಾಡುವಂತವರಾದ ನೀವು ಇಂದು ಸೋನಿಯಾ ಗಾಂಧಿಯವರಿಗೂ ಅಪಮಾನ ಮಾಡಿದ್ದೀರಿ ಎಂದು ತಿಳಿಸಿದರು. ನಾವು ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಆದರೆ ನಿಮ್ಮ ಮನಸ್ಥಿತಿ ನೋಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದೀರಿ. ಇದು ನಮ್ಮ ಪಕ್ಷದ ವಿಷಯ, ನಮ್ಮ ಪಕ್ಷ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಮಹಿಳೆಯರಿಗೂ ಅವಕಾಶ ಕೊಡಬೇಕು; ಅವರನ್ನು ಗೌರವಿಸಬೇಕು ಅನ್ನುವ ಕಾರಣಕ್ಕೆ ಮಹಿಳೆಯರಿಗೆ ಅವಕಾಶ ಕೊಡಲು ಮಾತು ಪ್ರಾರಂಭವಾಗಿದೆ. ಅದರಿಂದ ನಿಮಗೆ ಏನು ತೊಂದರೆ ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ ಮೀಸಲಾತಿ ಕೊಟ್ಟ ಮೋದಿಜೀ..
ಮಹಿಳೆಯರಿಗೆ ಶೇ 33 ಮೀಸಲಾತಿ ಕೊಟ್ಟಿರುವುದು ಕೂಡ ಮೋದಿಜೀ ಅವರು ಮತ್ತು ಬಿಜೆಪಿ. ನಿಮ್ಮ ಯೋಗ್ಯತೆಗೆ ನೀವು ಅಂಥ ಅವಕಾಶ ನೀಡಲೇ ಇಲ್ಲ ಎಂದು ಟೀಕಿಸಿದರು. ಕೇವಲ ನಾಟಕ ಆಡಿ ಆ ಮಸೂದೆಯನ್ನು ಎಷ್ಟೋ ಸಾರಿ ಅನುಮೋದನೆ ಪಡೆಯದಂತೆ ನೋಡಿಕೊಂಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಸರಕಾರವು ಮಹಿಳೆಯರಿಗೆ ಗೌರವ ಕೊಡುವ ಮತ್ತು ಅವರ ಹಕ್ಕುಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದು ತಿಳಿಸಿದರು.
ಮುಸಲ್ಮಾನ ಮಹಿಳೆಯರ ತ್ರಿವಳಿ ತಲಾಖ್ ರದ್ದು ಮಾಡಿ ಅವರಿಗೂ ರಕ್ಷಣೆ ಕೊಡುವ ಕೆಲಸ ಮಾಡಿದ್ದೇವೆ. ಆದರೆ, ನಿಮ್ಮದು ಹೆಣ್ಮಕ್ಕಳನ್ನು ಅಪಮಾನಿಸುವ ಪರಂಪರೆ. ಹೆಣ್ಮಕ್ಕಳು ಮತ್ತು ಅರ್ಧನಾರಿಯರನ್ನು ಅವಮಾನಿಸುವ ಕೆಲಸ ನಿಮ್ಮದು ಎಂದು ಟೀಕಿಸಿದರು. ನಿಮ್ಮ ನಾಯಕತ್ವಕ್ಕೆ ಬೆಲೆ ಬರಬೇಕಿದ್ದರೆ ದೇಶದ ಕ್ಷಮೆ ಕೇಳಿ; ಕಾಂಗ್ರೆಸ್ ಹೆಚ್ಚು ಕಡಿಮೆ ಮುಳುಗುವ ಹಡಗು. ಇನ್ನೊಂದೆರಡು ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ನಾಪತ್ತೆಯಾಗಲಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಅರಾಜಕತೆ ಪರಾಕಾಷ್ಠೆ ತಲುಪಿದೆ: ಪಿ.ರಾಜೀವ್
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ: ಬಿವೈ ವಿಜಯೇಂದ್ರ ವಾಗ್ಧಾಳಿ