ಮಂಡ್ಯ : ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ರಸ್ತೆಗೆ ರೈತನೋರ್ವ ಬೇಲಿ ಹಾಕಿ ಮೃತನ ಅಂತ್ಯಕ್ರಿಯೆಗೂ ರಸ್ತೆ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಸ್ಮಶಾನ ರಸ್ತೆಯಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಸೋಮವಾದಂದು ಗ್ರಾಮದ ಸತೀಶ್ ಎಂಬ ಯುವಕ ಮೃತಪಟ್ಟಿದ್ದರು. ಅದೇ ಗ್ರಾಮದ ರೈತ ಅಂದಾನಿಗೌಡ ಸ್ಮಶಾನದ ರಸ್ತೆ ತನ್ನ ಜಮೀನಿನಲ್ಲಿ ಇದೆ ಎಂದು ಕಳೆದ ಹದಿನೈದು ದಿನಗಳ ಹಿಂದೆ ಮುಳ್ಳು ತಂತಿ ಬೇಲಿ ಹಾಕಿಕೊಂಡಿದ್ದ. ಹೀಗಾಗಿ ಸ್ಮಶಾನಕ್ಕೆ ಮೃತ ವ್ಯಕ್ತಿಯ ಶವವನ್ನು ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಎಷ್ಟೇ ದಾರಿ ಬಿಡುವಂತೆ ಕೇಳಿದರೂ ರೈತ ಅಂದಾನಿಗೌಡ ಮಾತ್ರ, ನನ್ನ ಹೊಲ ಇದು. ದಾರಿ ಬಿಡೋದಿಲ್ಲ ಎಂಬುದಾಗಿ ಪಟ್ಟು ಹಿಡಿದಿದ್ದಾನೆ.
ಈ ಎಲ್ಲಾ ಕಾರಣದಿಂದಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಹೆಬ್ಬಾಡಿಹುಂಡಿ ಗ್ರಾಮದ ಮೃತ ಸತೀಶ್ ಪಾರ್ಥೀವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ಯೋದಕ್ಕೆ ದಾರಿಯೇ ಇಲ್ಲದಂತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ರಸ್ತೆ ಮಧ್ಯೆಯೇ ಕುಟುಂಬಸ್ಥರು ನಡೆಸಿದ್ದಾರೆ.
ಒಟ್ಟಾರೆಯಾಗಿ ರಾಜ್ಯದಲ್ಲೇ ಅಮಾನವೀಯ ಘಟನೆ ಎನ್ನುವಂತೆ ಮಂಡ್ಯದಲ್ಲಿ ರಸ್ತೆಯಲ್ಲೇ ಅಂತ್ಯಕ್ರಿಯೆಯನ್ನು ಮೃತನ ಕುಟುಂಬಸ್ಥರು ಸ್ಮಶಾನಕ್ಕೆ ಹೋಗಲು ಸಾಧ್ಯವಾಗದೇ ನಡೆಸಿದಂತ ಘಟನೆ ನಡೆದಿದೆ.
ವರದಿ: ಗಿರೀಶ್ ರಾಜ್, ಮಂಡ್ಯ