ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕದಲ್ಲಿ ನಕಲಿ ವೈದ್ಯರ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ ಕೂಡ ಮಾಡಲಾಗಿದೆ. ಅದು ಏನು ಅಂತ ಮುಂದೆ ಓದಿ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ನಕಲಿ ವೈದ್ಯಕೀಯ ವೃತ್ತಿಯನ್ನು ಬೇರುಸಮೇತ ಕಿತ್ತೊಗೆಯಲು ಆರೋಗ್ಯ ಇಲಾಖೆಯು ಆದೇಶವನ್ನು ಹೊರಡಿಸಿದ್ದು ಇದರನ್ವಯ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್’ಗಳು ತಮ್ಮ KPME ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸವುದು ಕಡ್ಡಾಯವಾಗಿದೆ ಎಂಬುದಾಗಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಅಲೋಪತಿ ಆಸ್ಪತ್ರೆಗಳು ನೀಲಿ ಬಣ್ಣ ಮತ್ತು ಆಯುರ್ವೇದಿಕ್ ಆಸ್ಪತ್ರೆಗಳು ಹಸಿರು ಬಣ್ಣದ ಬೋರ್ಡ್ ಬಳಸುವ ಮೂಲಕ ಬಣ್ಣ ಸಂಹಿತೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂಬುದಾಗಿ ತಿಳಿಸಿದ್ದಾರೆ.
ಖಾಸಗಿ ವೈದ್ಯಕೀಯ ಆಸ್ಪತ್ರೆಗಳು ಈ ನಿಯಮಗಳನ್ನು ಅನುಸರಿಸುವಲ್ಲಿ ವಿಫಲವಾದಲ್ಲಿ KPME ತಿದ್ದುಪಡಿ ಕಾಯಿದೆ 2017 ರ ಸೆಕ್ಷನ್ 19(5) ರ ಅನ್ವಯ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸುತ್ತೋಲೆಯನ್ನು ಪರಾಮರ್ಶಿಸುವಂತೆ ಸೂಚಿಸಿದ್ದಾರೆ.
ನಕಲಿ ಮತ್ತು ಅರ್ಹತೆ ಹೊಂದಿಲ್ಲದ ವೈದ್ಯರು ಸಮಾಜಕ್ಕೆ ಕಂಟಕರಾಗಿದ್ದು ರೋಗಿಗಳ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ನಮ್ಮ ಸರ್ಕಾರವು ರೋಗಿಗಳ ಸುರಕ್ಷತೆಗೆ ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ