ಬೆಂಗಳೂರು : ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ನಾಲ್ಕು ಹಂತದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಲಾಗುತ್ತಿದೆ.
ಈ ಕುರಿತು ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದು, ಅನ್ನಭಾಗ್ಯ ಯೋಜನೆಯ ಕುರಿತು ಜನರಲ್ಲಿ ಅರಿವು ಮೂಡಿಸಲು, ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕಲು ನಾಲ್ಕು ಹಂತದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಈಗಾಗಲೇ ರಾಜ್ಯಮಟ್ಟದ ಸಮಿತಿ ರಚಿಸಲಾಗಿದೆ. ಜಿಲ್ಲಾ, ತಾಲೂಕು ಸಮಿತಿಗಳನ್ನು ರಚಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಮಟ್ಟದ ಸಮಿತಿಗಳನ್ನು ಪುನರ್ ರಚಿಸಲಾಗಿದೆ. ಈ ಸಮಿತಿಗಳ ಕಾರ್ಯನಿರ್ವಹಣೆ, ಅಧಿಕಾರ ವ್ಯಾಪ್ತಿ ನಿಗದಿಪಡಿಸಲು ನಿಯಮಗಳನ್ನು ರೂಪಿಸಲಾಗಿದೆ. ರಾಜ್ಯಮಟ್ಟದ ಸಮಿತಿಗೆ ಆಹಾರ ಸಚಿವರೇ ಅಧ್ಯಕ್ಷರಾಗಿರುತ್ತಾರೆ. ನ್ಯಾಯಬೆಲೆ ಅಂಗಡಿ ಹಂತದ ಜಾಗೃತಿ ಸಮಿತಿಗೆ ಆ ವ್ಯಾಪ್ತಿಯಲ್ಲಿ ಪಡಿತರ ಹೊಂದಿರುವ ಮೂವರು ಮಹಿಳೆಯರ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.