ನವದೆಹಲಿ : ಕೊರೊನಾ ಪೊಸಿಟಿವ್ ಬಂದು ವಾಸಿಯಾದವರು ನಾವು ಹೇಳುವ ಈ ವಿಷಯವನ್ನು ತುಸು ಗಮನ ಕೊಡಿ. ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿ, ಕಾಲಾನಂತರ ಅವರ ಆರೋಗ್ಯದಲ್ಲಿ ಕೆಲ ಏರು ಪೇರು ಆಗುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನೆಗಳು ಹೇಳುತ್ತಿವೆ. ಕೋವಿಡ್ ನಿಂದ ಗುಣಮುಖರಾದವರಲ್ಲಿ ಕಾಲಾನಂತರ ಹೃದಯ ಹಾಗು ರಕ್ತನಾಳ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ. ಹಾಗಾಗಿ ಕೋವಿಡ್‌ನಿಂದ ಗುಣಮುಖರಾದವರು ತಪ್ಪದೇ ಮೂರು ತಿಂಗಳಿಗೊಮ್ಮೆ ತಮ್ಮ ಹೆಲ್ತ್ ಚೆಕ್‌ಅಪ್ ಮಾಡಿಸಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಕನಿಷ್ಟ ಪಕ್ಷ ಹೃದಯ ಪರೀಕ್ಷೆಯಾದರೂ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು.
ಕೋವಿಡ್ ಎರಡನೇ ಅಲೆ ಯುವ ವಯಸ್ಸಿನವರಿಗೆ ಹೆಚ್ಚು ಕಾಡಿದ್ದು, ಐವತ್ತು ವರ್ಷದ ಒಳಗಿನವರಿಗೂ ಈ ಹೃದಯ ಸಂಬಂಧಿ ಕಾಯಿಲೆ ಬರುವ ಸಂಭವ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮೂರು ತಿಂಗಳಿಗೊಮ್ಮೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಅಭ್ಯಾಸವೆಂದು ವೈದ್ಯರು ಸಲಹೆ ನೀಡುತ್ತಾರೆ.
ಕೊರೊನಾ ತಗುಲಿದ ಮೇಲೆ ದೇಹ ಬಳಲಿರುತ್ತದೆ. ಹಾಗು ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹೀಗಿರುವಾಗ ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್‌ಗಳ ಕೊರತೆ ಸರಿ ದೂಗಿಸುವ ಉತ್ತಮ ಆರೋಗ್ಯಕರವಾದ ಆಹಾರ ಸೇವನೆ ಮಾಡಬೇಕು. ಎಕ್ಸಸೈಸ್, ಯೋಗ, ಪ್ರಾಣಾಯಮಗಳನ್ನು ರೂಢಿಸಿಕೊಳ್ಳಬೇಕು. ಧೂಮಪಾನ, ಮಧ್ಯಪಾನ ವೆಸನಿಗಳು ಆದಷ್ಟು ಇದನ್ನು ಬಿಡುವ ಪ್ರಯತ್ನ ಮಾಡಿದರೆ ಒಳ್ಳೆಯದು. ಹೆಚ್ಚು ಕರಿದ ಹಾಗು, ಮಸಾಲಾಭರಿತ ಆಹಾರಗಳ ಸೇವನೆ ಮಾಡಬಾರದು. ದೇಹಕ್ಕೆ ಕೊಲೆಸ್ಟ್ರಾಲ್ ನೀಡುವಂತಹ ಆಹಾರಗಳನ್ನು ದೂರ ಮಾಡಬೇಕು. ಹೃದಯದ ಆರೋಗ್ಯಕ್ಕೆ ಹೆಚ್ಚು ಕಾಳಜಿ ನೀಡಬೇಕು. ಹೀಗೆ ಕೋವಿಡ್‌ನಿಂದ ಗುಣಮುಖರಾದವರು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆಯಾದರೂ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ.
ಇನ್ನು ಲಸಿಕೆ ಪಡೆಯೋದು ಕೋವಿಡ್ ಹಾಗು ಹೃದಯ ಸಂಬಂಧಿ ಕಾಯಿಲೆಗಳಿಗೆ ಎಷ್ಟು ಪರಿಣಾಮಕಾರಿ ಎಂದು ನೋಡುವುದಾದರೆ. ಲಸಿಕೆ ಪಡೆದರೆ ಕೋವಿಡ್ ಬಂದರೂ ಅಷ್ಟು ಅಪಾಯವನ್ನು ಉಂಟು ಮಾಡುವುದಿಲ್ಲ. ಇನ್ನು ಹೃದಯ ಆರೋಗ್ಯದ ಬಗ್ಗೆ ಹೇಳುವುದಾದರೆ ದೇಹಕ್ಕೆ ಸೋಂಕಿನ ಅಪಾಯವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನೂ ಕಾಪಾಡಲು ಇದು ತೀರಾ ಉತ್ತಮ ಪರಿಣಾಮಕಾರಿಯಾಗಿದೆ. ಹಾಗಾಗಿ ಲಸಿಕೆ ಪಡೆಯುವುದು ಅವಶ್ಯಕ ಎನ್ನುತ್ತಾರೆ ವೈದ್ಯರು.
ಹೀಗಾಗಿ ಕೋವಿಡ್‌ನಿಂದ ಗುಣಮುಖರಾದವರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡು ಆಗಾಗ ಹೃದಯದ ಪರೀಕ್ಷೆ ಮಾಡಿಸಿಕೊಂಡು ಮುಂದಾಗುವ ಅಪಾಯವನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ.